ನಿನ್ನೆ ( ಏಪ್ರಿಲ್ 13 ) ಐಪಿಎಲ್ 2026ರ ಲೀಗ್ ಹಂತದ 21ನೇ ಲೀಗ್ ಹಂತದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 57 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಈ ಮೂಲಕ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ರಾಜಸ್ಥಾನ್ ರಾಯಲ್ಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವನ್ನು ಸಾಧಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 217 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಜಸ್ಥಾನ್ ರಾಯಲ್ಸ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಯಿತು.
ಸನ್ ರೈಸರ್ಸ್ ಹೈದರಾಬಾದ್ ಆರಂಭಿಕರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ನಾಯಕ ಇಶಾನ್ ಕಿಶನ್ ಹಾಗೂ ಕ್ಲಾಸೆನ್ ಆಟ ತಂಡ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇನ್ನು ಇದೇ ಮೊದಲ ಐಪಿಎಲ್ ಪಂದ್ಯವನ್ನಾಡಿದ ಸನ್ ರೈಸರ್ಸ್‌ನ ಪ್ರಫುಲ್ ಹಿಂಗೆ ಹಾಗೂ ಸಕಿಬ್ ಹುಸೈನ್ ತಲಾ ನಾಲ್ಕು ವಿಕೆಟ್ ಪಡೆದು ರಾಜಸ್ಥಾನ್ ಗೆಲುವಿನ ಕನಸಿಗೆ ತಣ್ಣೀರೆರೆಚಿದರು.
ಹೀಗೆ ಗೆಲುವಿನ ಸರದಾರರಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದಿದ್ದ ಹೆನ್‌ರಿಚ್ ಕ್ಲಾಸೆನ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಪಡೆದರು. ಕ್ಲಾಸೆನ್ 26 ಎಸೆತಗಳಲ್ಲಿ 40 ರನ್ ಬಾರಿಸಿ ತುಷಾರ್ ದೇಶಪಾಂಡೆ ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆದರು. ಹೀಗೆ ಕ್ಲಾಸೆನ್ ವಿಕೆಟ್ ಪಡೆದ ತುಷಾರ್ ದೇಶಪಾಂಡೆ ವಿಕೆಟ್ ಸಂಭ್ರಮಿಸಲು ಮುಂದಾಗಿದ್ದರು. ಆದರೆ ಕ್ಲಾಸೆನ್ ದೇಶಪಾಂಡೆಗೆ ಖಡಕ್ ಲುಕ್ ಕೊಟ್ಟಿದ್ದು, ಸಂಭ್ರಮಿಸಲು ಮುಂದಾಗಿದ್ದ ದೇಶಪಾಂಡೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.instagram.com/reel/DXE_n4SgV5T/?igsh=ZjBrZTJvbmtucml1

