ನಾಡಿದ್ದು ( ಮಾರ್ಚ್ 28 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದೆ.
ಟೂರ್ನಿ ಆರಂಭಕ್ಕೂ ಮುನ್ನ ಎಲ್ಲ ತಂಡಗಳ ಆಟಗಾರರು ಕಳೆದೊಂದು ವಾರದಿಂದ ಮೈದಾನಕ್ಕಿಳಿದು ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಈ ಬಾರಿ ಬಹುತೇಕ ಎಲ್ಲ ಫ್ರಾಂಚೈಸಿಗಳ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದು, ಬದಲಿ ಆಟಗಾರರ ನೇಮಕ ಮಾಡುವ ಕೆಲಸ ಸಾಗುತ್ತಿದೆ.
ಹಾಗೆಯೇ ಮೂರು ಬಾರಿ ಚಾಂಪಿಯನ್ ಆಗಿರುವ ಕೊಲ್ಕತ್ತಟಾ ನೈಟ್ ರೈಡರ್ಸ್ ಸಹ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಬದಲಿ ಆಟಗಾರರ ನೇಮಕ ಮಾಡುವಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೆ ಗಾಯಕ್ಕೊಳಗಾದ ಆಕಾಶ್ ದೀಪ್ ಬದಲಿ ಆಟಗಾರನನ್ನಾಗಿ ಸೌರಭ್ ದುಬೆಯನ್ನು ನೇಮಿಸಿಕೊಂಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಇದೀಗ ತಂಡದ ಪ್ರಮುಖ ವೇಗಿ ಹರ್ಷಿತ್ ರಾಣಾ ಬದಲಿಗೆ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದ ನವ್‌ದೀಪ್ ಸೈನಿಯನ್ನು ನೇಮಿಸಿಕೊಂಡಿದೆ.
ಈ ಮೂಲಕ ಕಾಲು ನೋವಿನಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಹರ್ಷಿತ್ ರಾಣಾ ಟಿ ಟ್ವೆಂಟಿ ವಿಶ್ವಕಪ್ ಆಡುವ ಅವಕಾಶ ಕಳೆದುಕೊಂಡಿದ್ದು ಮಾತ್ರವಲ್ಲದೇ ಇದೀಗ ಐಪಿಎಲ್‌ನಿಂದಲೂ ಸಹ ಹೊರಬಿದ್ದಿದ್ದಾರೆ.
ಇನ್ನು ನವ್‌ದೀಪ್ ಸೈನಿ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೂ ಸಹ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಬಳಿಕ 2019ರಲ್ಲಿ ಆರ್‌ಸಿಬಿ ಸೇರಿದ ಸೈನಿ 13 ಪಂದ್ಯಗಳಲ್ಲಿ 11 ವಿಕೆಟ್ ಪಡೆದುಕೊಂಡಿದ್ದರು. ನಂತರ 2020 ಹಾಗೂ 2021ರಲ್ಲಿ ಆರ್‌ಸಿಬಿ ಪರವೇ ಕಣಕ್ಕಿಳಿದ ಸೈನಿ 2022 ಹಾಗೂ 23ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕೇವಲ 4 ಪಂದ್ಯಗಳನ್ನಾಡಿದ್ದರು. ಬಳಿಕ ನಡೆದ ಹರಾಜಿನಲ್ಲಿ ಸೈನಿ ಅನ್‌ಸೋಲ್ಡ್ ಆಗಿ ಉಳಿದುಕೊಂಡಿದ್ದರು.
ಸೈನಿ ಇಲ್ಲಿಯವರೆಗೆ ಒಟ್ಟು 23 ಐಪಿಎಲ್ ವಿಕೆಟ್‌ಗಳನ್ನು ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲ ಮೂರು ಆವೃತ್ತಿಗಳಲ್ಲಿಯೂ ಕಣಕ್ಕಿಳಿದ ಅನುಭವ ಹೊಂದಿದ್ದಾರೆ.

