ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಅರ್ಧಶತಕ, ಫಿನ್ ಅಲೆನ್ ಹಾಗೂ ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 221 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಫಿನ್ ಅಲೆನ್ ಜೋಡಿ 69 ರನ್‌ಗಳ ಉತ್ತಮ ಜತೆಯಾಟವನ್ನಾಡಿದರು. ಫಿನ್ ಅಲೆನ್ 17 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 37 ರನ್ ಬಾರಿಸಿದರೆ, ಅಜಿಂಕ್ಯ ರಹಾನೆ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 67 ರನ್ ಬಾರಿಸಿದರು. ಕೆಮರಾನ್ ಗ್ರೀನ್ 18 ರನ್ ಬಾರಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ ಬಾರಿಸಿದರು. ಇನ್ನುಳಿದಂತೆ ರಿಂಕು ಸಿಂಗ್ 21 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿದರೆ, ರಮಣ್‌ದೀಪ್ ಸಿಂಗ್ ಅಜೇಯ 4 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ ಟಾಪ್ 3 ಆಟಗಾರರ ವಿಕೆಟ್‌ಗಳನ್ನು ಪಡೆಯುವ ಮೂಲಕ ಕೆಕೆಆರ್ ಪರ ಇನ್ನಷ್ಟು ರನ್ ಹೊಳೆ ಹರಿಯುವುದನ್ನು ತಪ್ಪಿಸಿದರು ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು.

