ಮೊನ್ನೆ ( ಏಪ್ರಿಲ್ 18 ) ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 27ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 10 ರನ್‌ಗಳ ಗೆಲುವನ್ನು ದಾಖಲಿಸಿತು.
20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿದ ಸನ್ ರೈಸರ್ಸ್ ಹೈದರಾಬಾದ್ ಚೆನ್ನೈ ಸೂಪರ್ ಕಿಂಗ್ಸ್‌ಗೆ 195 ರನ್‌ಗಳ ಗುರಿ ನೀಡಿತ್ತು. ಈ ಆವೃತ್ತಿಯಲ್ಲಿ ಬೌಲಿಂಗ್ ಕುರಿತಾಗಿ ಹೀನಾಯವಾಗಿ ಟ್ರೋಲ್ ಆಗಿರುವ ಸನ್ ರೈಸರ್ಸ್ ಹೈದರಾಬಾದ್ ಈ ಮೊತ್ತವನ್ನು ಬೆನ್ನಟ್ಟಲು ಬಿಡದೇ ನಿಭಾಯಿಸುತ್ತಾ ಎಂಬ ಅನುಮಾನ ಮೂಡಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್‌ಗಳಲ್ಲಿ 184 ರನ್‌ಗಳಿಗೆ ಕಟ್ಟಿಹಾಕಿ ಜಯ ಸಾಧಿಸಿತು. ಹೀಗೆ ಟೀಕೆಗೊಳಗಾಗಿದ್ದ ಬೌಲಿಂಗ್ ವಿಭಾಗವೇ ಸನ್ ರೈಸರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿತು.
ಹೀಗೆ ಹೈದರಾಬಾದ್ ಗೆಲುವು ಸಾಧಿಸಿದ ಬೆನ್ನಲ್ಲೇ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನಡೆದ ಘಟನೆಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವಮ್ ದುಬೆ ವಿಕೆಟ್‌ಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಅಭಿಮಾನಿಯೊಬ್ಬ ನಿಂಬೆ ಹಣ್ಣು ಹಿಡಿದು ಮಂತ್ರಿಸುತ್ತಿದ್ದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಶಿವಮ್ ದುಬೆ ಔಟ್ ಆದ ಎಸೆತದ ಸಮಯದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ವ್ಯಕ್ತಿ ನಿಂಬೆ ಹಣ್ಣನ್ನು ಮಂತ್ರಿಸಿ ಎಸೆದಿದ್ದಾನೆ. ಬೆನ್ನಲ್ಲೇ ದುಬೆ ಬೌಲ್ಡ್ ಆಗಿ ಔಟ್ ಆಗಿದ್ದಾರೆ. ವೈರಲ್ ಆದ ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನಿಂಬೆ ಹಣ್ಣು ಮಂತ್ರಿಸಿದ್ದರ ಕುರಿತು ಬಿಸಿಸಿಐಗೆ ಪತ್ರ ಬರೆದಿದೆ ಎಂದು ಹೇಳಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನ ಅಡಿಯಲ್ಲಿ ಪತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಮಾಟ ಮಂತ್ರ ಚಟುವಟಿಕೆಗಳಿಂದ ತಮ್ಮ ತಂಡದ ಆಟಗಾರರಿಗೆ ತೊಂದರೆಯಾಗಿದೆ ಎಂದು ಬರೆಯಲಾಗಿದೆ. ಹೀಗೆ ವೈರಲ್ ಆದ ಪತ್ರವನ್ನು ಹಂಚಿಕೊಂಡಿರುವ ಅನೇಕ ನೆಟ್ಟಿಗರು ಚೆನ್ನೈ ಫ್ರಾಂಚೈಸಿ ವಿರುದ್ಧ ಟೀಕೆ ಮಾಡಿದ್ದಾರೆ.
ಆದರೆ ಅಸಲಿಯತ್ತಿಗೆ ಇದು ನಕಲಿ ಪತ್ರ. ಚೆನ್ನೈ ಸೂಪರ್ ಕಿಂಗ್ಸ್ ಈ ಘಟನೆ ಬಗ್ಗೆ ಯಾವುದೇ ದೂರನ್ನೂ ದಾಖಲಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರೋಧಿಗಳು ನಕಲಿ ಪತ್ರವನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

