ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ರೋಚಕ ಘಟ್ಟಕ್ಕೆ ಬಂದು ತಲುಪಿದ್ದು, ಕೊನೆಗೆ ಯಾವ ನಾಲ್ಕು ತಂಡಗಳು ಪ್ಲೇಆಫ್ ತಲುಪಲಿವೆ ಎಂಬ ಪ್ರಶ್ನೆ ಎದ್ದಿದೆ.
ಒಂದೆಡೆ ಟೂರ್ನಿ ಯಶಸ್ವಿಯಾಗಿ ಪ್ಲೇಆಫ್ ತಲುಪುತ್ತಿದೆ ಎನ್ನುವಾಗಲೇ ಮತ್ತೊಂದೆಡೆ ಟೂರ್ನಿಯ ಬಗ್ಗೆ ಹಿಂದೆಂದೂ ಕೇಳಿಬರದ ಗಂಭೀರ ಆರೋಪ ಕೇಳಿಬಂದಿದೆ. ಹೌದು, ಬಿಸಿಸಿಐ ನಿನ್ನೆಯಷ್ಟೇ ( ಮೇ 7 ) ಆಟಗಾರರಿಗೆ ಹಾಗೂ ಫ್ರಾಂಚೈಸಿಗಳಿಗೆ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸಲಹಾ ಪಟ್ಟಿಯನ್ನು ಹೊರಡಿಸಿದೆ.
ಈ ಪಟ್ಟಿಯಲ್ಲಿ ಅತಿ ಮುಖ್ಯವಾಗಿ ಗಮನ ಸೆಳೆದ ಅಂಶವೆಂದರೆ ಅದು ಆಟಗಾರರನ್ನು ಹನಿಟ್ರ್ಯಾಪ್ ಮಾಡುವ ಸಾಧ್ಯತೆ ಇದೆ ಎನ್ನುವ ಸಾಲು. ಹೀಗಾಗಿ ಆಟಗಾರರು ಅನಧಿಕೃತ ವ್ಯಕ್ತಿಗಳನ್ನು ಹೊಟೇಲ್‌ಗೆ ಕರೆತರುವ ಕೆಲಸವನ್ನು ಮಾಡಬಾರದು ಎಂದು ಎಚ್ಚರಿಕೆಯನ್ನೂ ಸಹ ಬಿಸಿಸಿಐ ನೀಡಿತು.
ಹೀಗೆ ಸಲಹೆಯನ್ನು ಬಿಸಿಸಿಐ ನೀಡಿದ ಬೆನ್ನಲ್ಲೇ ವರದಿಯೊಂದು ಹರಿದಾಡುತ್ತಿದ್ದು, ಆಟಗಾರನ ಪ್ರೇಯಸಿಯೋರ್ವಳು ಆಟಗಾರನಿಂದ ತಂಡವೊಂದರ ನಿರ್ಣಾಯಕ ಮಾಹಿತಿಗಳನ್ನು ಹೊರಗಿನವರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಈ ವರದಿ ಪ್ರಕಟವಾಗುತ್ತಿದ್ದಂತೆ ಅದರ ಕುರಿತು ಚರ್ಚೆಗಳು ಜೋರಾಗಿದ್ದು, ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಅರ್ಷ್‌ದೀಪ್ ಸಿಂಗ್ ಕಡೆ ನೆಟ್ಟಿಗರು ಬೆರಳು ಮಾಡಿ ತೋರಿಸಿದ್ದಾರೆ.
ಇತರೆ ಆಟಗಾರರಿಗೆ ಪ್ರೇಯಸಿಯರಿದ್ದರೂ ಸಹ ಅವರು ಪಂದ್ಯ ವೀಕ್ಷಣೆಗೆ ಮಾತ್ರ ಬರುತ್ತಿದ್ದರು. ಆದರೆ ಈ ಇಬ್ಬರು ಮಾತ್ರ ಆಟಗಾರರ ಜತೆ ಪ್ರಯಾಣ ಮಾಡಿ ಹೊಟೇಲ್‌ಗೂ ಸಹ ಹೋಗುತ್ತಿದ್ದರು ಎಂದು ನೆಟ್ಟಿಗರು ಆರೋಪಿಸಿದ್ದು, ಈ ಇಬ್ಬರಲ್ಲಿ ಮಾಹಿತಿಯನ್ನು ಲೀಕ್ ಮಾಡಿದವರು ಯಾರು ಎಂಬ ಪ್ರಶ್ನೆ ಎದ್ದಿದೆ. ಇನ್ನು ಫ್ರಾಂಚೈಸಿಗೆ ಆಟಗಾರನ ಪ್ರೇಯಸಿಯ ಚಟುವಟಿಕೆಗಳ ಮೇಲೆ ಅನುಮಾನ ಹುಟ್ಟಿ ಬಿಸಿಸಿಐಗೆ ವಿಷಯ ಮುಟ್ಟಿಸಿದೆ ಎಂದೂ ಸಹ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಈ ಇಬ್ಬರಲ್ಲಿ ಯಾರೇ ಇರಲಿ ಅಥವಾ ಬೇರೆ ಆಟಗಾರನ ಪ್ರೇಯಸಿಯೇ ಆಗಿರಲಿ. ವರದಿ ಸಾಬೀತಾದರೆ ಆ ಆಟಗಾರ ಪ್ರೀತಿಯನ್ನು ನಂಬಿ ಮೋಸ ಹೋಗಿರುವುದು ಪಕ್ಕಾ ಆಗಲಿದೆ. ಇದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಲಿದೆ.

