HomeLatest News4 ಚಿನ್ನ ಗೆದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಈಗ ತರಕಾರಿ ವ್ಯಾಪಾರಿ ; ಕಣ್ಣೀರು ತರಿಸುತ್ತೆ ಈ...

4 ಚಿನ್ನ ಗೆದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಈಗ ತರಕಾರಿ ವ್ಯಾಪಾರಿ ; ಕಣ್ಣೀರು ತರಿಸುತ್ತೆ ಈ ಗೋಲ್ಡ್ ಮೆಡಲಿಸ್ಟ್ ಬದುಕು | Watch

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ, ದೇಶದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದು ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟ ಓರ್ವ ಹೆಮ್ಮೆಯ ಕ್ರೀಡಾಪಟು, ಇಂದು ಕುಟುಂಬದ ಹೊಟ್ಟೆ ತುಂಬಿಸಲು ರಸ್ತೆಬದಿಯಲ್ಲಿ ತರಕಾರಿ ಮಾರುವ ಮತ್ತು ಕ್ಯಾಬ್ ಓಡಿಸುವ ದುಸ್ಥಿತಿಗೆ ತಲುಪಿದ್ದಾರೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅರ್ಗೋರಾ ಚೌಕ್‌ನಲ್ಲಿ ತರಕಾರಿ ಮಾರುತ್ತಿರುವ 29 ವರ್ಷದ ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ ಅಮರ್‌ದೀಪ್ ಕುಮಾರ್ ಅವರ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕ್ರೀಡಾಂಗಣದಲ್ಲಿ ಪದಕ ಗೆದ್ದಾಗ ಮಾತ್ರ ಸಂಭ್ರಮಿಸಿ, ನಂತರ ಕೈಬಿಡುವ ನಮ್ಮ ಆಡಳಿತ ವ್ಯವಸ್ಥೆಯ ಅಸಲಿ ಮುಖವಾಡವನ್ನು ಬಯಲು ಮಾಡಿದೆ.

ಗೋಡೆಯ ಮೇಲೆ ಚಿನ್ನದ ಪದಕ, ಕೈಯಲ್ಲಿ ತಕ್ಕಡಿ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಮರ್‌ದೀಪ್ ಕುಮಾರ್ ತಮ್ಮ ತಾತ್ಕಾಲಿಕ ತರಕಾರಿ ಅಂಗಡಿಯಲ್ಲಿ ಕುಳಿತು ತಕ್ಕಡಿಯಲ್ಲಿ ತರಕಾರಿಗಳನ್ನು ತೂಕ ಮಾಡಿ ಗ್ರಾಹಕರಿಗೆ ನೀಡುತ್ತಿರುವುದು ಕಂಡುಬರುತ್ತದೆ. ಆದರೆ, ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿದ್ದು ಆ ಅಂಗಡಿಯ ಮಣ್ಣಿನ ಗೋಡೆಗೆ ತೂಗುಹಾಕಲಾಗಿದ್ದ ನಾಲ್ಕು ಪ್ರಕಾಶಮಾನವಾದ ಅಂತರರಾಷ್ಟ್ರೀಯ ಚಿನ್ನದ ಪದಕಗಳು!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶಕ್ಕೆ ಬಂಗಾರ ಗೆದ್ದುಕೊಟ್ಟ ಯುವಕನೊಬ್ಬ ರಸ್ತೆಬದಿಯಲ್ಲಿ ಜೀವನಕ್ಕಾಗಿ ಹೆಣಗಾಡುತ್ತಿರುವುದನ್ನು ಕಂಡ ನೆಟ್ಟಿಗರು ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರಿದು ಅಮರ್‌ದೀಪ್ ಕುಮಾರ್?: ಸಾಧನೆಯ ಹಾದಿ

ಅಮರ್‌ದೀಪ್ ಕ್ರೀಡಾ ಜಗತ್ತಿನಲ್ಲಿ ಮಾಡಿದ ಸಾಧನೆ ಸಣ್ಣದೇನಲ್ಲ:

2015: ಮಲೇಷ್ಯಾದಲ್ಲಿ ನಡೆದ ಏಷ್ಯನ್ ಜೂನಿಯರ್ ತ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ.

2017: ಕಠ್ಮಂಡುವಿನಲ್ಲಿ ನಡೆದ ಇಂಡೋ-ನೇಪಾಳ ತ್ರೋಬಾಲ್ ಸರಣಿಯಲ್ಲಿ ಚಿನ್ನದ ಪದಕ.

2019: ಬೆಂಗಳೂರಿನಲ್ಲಿ ನಡೆದ ಸೌತ್ ಏಷ್ಯನ್ ತ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ಪರ ಆಡಿ ಚಿನ್ನದ ಪದಕ.

2026: ರಾಂಚಿಯಲ್ಲಿ ನಡೆದ ಸೌತ್ ಏಷ್ಯನ್ ತ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಮುಡಿಗೇರಿಸಿದ್ದರು.

ಇಷ್ಟೆಲ್ಲಾ ಸಾಧನೆ ಮಾಡಿದರೂ, ಕುಟುಂಬದ ತುತ್ತಿನ ಚೀಲ ತುಂಬಿಸಲು ಅವರು ಹಗಲು ತರಕಾರಿ ಮಾರಿ, ರಾತ್ರಿ ಕ್ಯಾಬ್ ಓಡಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಎಲ್ಲಾ ಸಂಕಷ್ಟಗಳ ನಡುವೆಯೂ ಕ್ರೀಡಾ ಪ್ರೇಮವನ್ನು ಬಿಡದ ಅವರು, ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ, ಕ್ರೀಡಾಪಟುವಿನ ಕಣ್ಣೀರು:

ಛತ್ತೀಸ್‌ಗಢ, ಹರಿಯಾಣ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗಿದೆ. ಆದರೆ, ಜಾರ್ಖಂಡ್ ಸರ್ಕಾರಕ್ಕೆ ಅಮರ್‌ದೀಪ್ 2016 ರಿಂದಲೂ ಉದ್ಯೋಗ ಮತ್ತು ಪ್ರೋತ್ಸಾಹಧನಕ್ಕಾಗಿ ಸಲ್ಲಿಸುತ್ತಿರುವ ಅರ್ಜಿಗಳು ಕಡತಗಳಲ್ಲೇ ಧೂಳು ಹಿಡಿಯುತ್ತಿವೆ. ಯಾವುದೇ ಸರ್ಕಾರಿ ನೆರವು ಸಿಗದೆ ಈ ಚಾಂಪಿಯನ್ ಕ್ರೀಡಾಪಟು ಬೀದಿಗೆ ಬಿದ್ದಿದ್ದಾರೆ.

ನೆಟ್ಟಿಗರ ಆಕ್ರೋಶದ ಕಟ್ಟೆಯೊಡೆತ:

“ಗೋಡೆಯ ಮೇಲೆ ಚಿನ್ನದ ಪದಕ, ರಸ್ತೆಬದಿಯಲ್ಲಿ ತರಕಾರಿ ರಾಶಿ… ಇದು ಕೇವಲ ಕರುಳು ಹಿಂಡುವ ಚಿತ್ರವಲ್ಲ, ನಮ್ಮ ಕ್ರೀಡಾ ವ್ಯವಸ್ಥೆಗೆ ಕೇಳಲಾದ ಅತ್ಯಂತ ಅಸಹನೀಯ ಪ್ರಶ್ನೆ. ಗೆದ್ದಾಗ ಕ್ಯಾಮೆರಾ ಮುಂದೆ ನಿಲ್ಲಿಸುವ ನಾವು, ಕ್ಯಾಮೆರಾಗಳು ಹೋದ ಮೇಲೆ ಅವರ ಗತಿ ಏನು ಎಂದು ಎಂದಾದರೂ ಯೋಚಿಸಿದ್ದೇವಾ? ಇಂತಹ ವ್ಯವಸ್ಥೆ ಇರುವಾಗ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೆಡಲ್ ಹೇಗೆ ಬರುತ್ತದೆ?” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ವಿಡಿಯೋ ಬೆನ್ನಲ್ಲೇ ಎಚ್ಚೆತ್ತ ಸಿಎಂ ಹೇಮಂತ್ ಸೊರೇನ್:

ಅಮರ್‌ದೀಪ್ ಕುಮಾರ್ ಅವರ ಮನಕಲಕುವ ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಕ್ಷಣವೇ ಸ್ಪಂದಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸಿಎಂ, “ಈ ಪ್ರಕರಣವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿ, ಆಟಗಾರನಿಗೆ ಸೂಕ್ತ ನೆರವು ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ರೀಡಾ ಇಲಾಖೆಗೆ ಆದೇಶಿಸಿದ್ದೇನೆ” ಎಂದು ತಿಳಿಸಿದ್ದಾರೆ. ಸರ್ಕಾರದ ಈ ಭರವಸೆಯಾದರೂ ಈ ಚಿನ್ನದ ಹುಡುಗನ ಬದುಕಿಗೆ ಆಸರೆಯಾಗಲಿದೆಯೇ ಎಂದು ಕಾದುನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular