ಭಾರತದ ವೇಗದ ಡೆಲಿವರಿ ವ್ಯವಸ್ಥೆ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಅದು ಈಗ ಜನರ ತುರ್ತು ಅಗತ್ಯಗಳಿಗೆ ಜೀವನಾಡಿಯಾಗಿ ಬದಲಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ದೆಹಲಿಯ ಅಮೆರಿಕ ರಾಯಭಾರ ಕಚೇರಿಯ ಮುಂದೆ ವೀಸಾ ಸಂದರ್ಶನಕ್ಕಾಗಿ ಕಾಯುತ್ತಿದ್ದ ಯುವತಿಯೊಬ್ಬರಿಗೆ ಬ್ಲಿಂಕಿಟ್ (Blinkit) ಆ್ಯಪ್ ಸಂಕಷ್ಟ ಕಾಲದ ಸಂಜೀವಿನಿಯಂತೆ ನೆರವಾಗಿದೆ.
ನಡೆದಿದ್ದೇನು?
ಗೌರಿ ಗುಪ್ತಾ ಎಂಬ ಐಐಟಿ ಪದವೀಧರೆ ಹಾಗೂ ಎಐ ಸ್ಟಾರ್ಟ್ಅಪ್ ಸಂಸ್ಥಾಪಕರು ದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ಒ-1 (O-1) ವೀಸಾ ಸಂದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಬೆಳಿಗ್ಗೆ 8 ಗಂಟೆಗೆ ಅವರ ಸಂದರ್ಶನ ನಿಗದಿಯಾಗಿತ್ತು. ಆದರೆ ಸಾಲಿನಲ್ಲಿ ನಿಂತಿದ್ದಾಗ ಕೆಲವು ಪ್ರಮುಖ ದಾಖಲೆಗಳನ್ನು ತರಲು ಮರೆತಿರುವುದು ಅವರಿಗೆ ಹಠಾತ್ತಾಗಿ ನೆನಪಿಗೆ ಬಂದಿದೆ. ಹತ್ತಿರದಲ್ಲಿ ಯಾವುದೇ ಪ್ರಿಂಟಿಂಗ್ ಶಾಪ್ ಇಲ್ಲದ ಕಾರಣ ಅವರು ಆತಂಕಕ್ಕೆ ಒಳಗಾಗಿದ್ದರು.
ಸೆಕ್ಯೂರಿಟಿ ಗಾರ್ಡ್ ನೀಡಿದ ಐಡಿಯಾ
ಗೌರಿ ಅವರ ಆತಂಕವನ್ನು ಗಮನಿಸಿದ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ಬ್ಲಿಂಕಿಟ್ ಆ್ಯಪ್ ಮೂಲಕ ಪ್ರಿಂಟ್ ಔಟ್ ಆರ್ಡರ್ ಮಾಡುವಂತೆ ಸಲಹೆ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಗೌರಿ, ತಾವು ಸಾಲಿನಲ್ಲಿ ನಿಂತಿರುವಾಗಲೇ ತಮ್ಮ ಫೋನ್ ಮೂಲಕ ದಾಖಲೆಗಳನ್ನು ಆ್ಯಪ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಚ್ಚರಿಯೆಂದರೆ, ಕೇವಲ 15 ನಿಮಿಷಗಳಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್ ಅವರು ಕೇಳಿದ ದಾಖಲೆಗಳ ಪ್ರಿಂಟ್ ಔಟ್ ಅನ್ನು ರಾಯಭಾರ ಕಚೇರಿಯ ಮುಂದೆಯೇ ತಲುಪಿಸಿದ್ದಾರೆ.
ಯಶಸ್ವಿಯಾದ ವೀಸಾ ಸಂದರ್ಶನ
ಸರಿಯಾದ ಸಮಯಕ್ಕೆ ದಾಖಲೆಗಳು ಕೈಸೇರಿದ ಕಾರಣ ಗೌರಿ ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿದರು. ಇದೀಗ ಅವರ ವೀಸಾ ಕೂಡ ಅನುಮೋದನೆಯಾಗಿದೆ. ಈ ಕುರಿತು ಎಕ್ಸ್ (ಟ್ವಿಟ್ಟರ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಭಾರತದ ಇಂತಹ ಸೇವೆಗಳು ನಿಜಕ್ಕೂ ಒಂದು ಸೌಭಾಗ್ಯ. ನನ್ನ ಇಡೀ ದಿನವನ್ನೇ ಬ್ಲಿಂಕಿಟ್ ಉಳಿಸಿದೆ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಭಾರತದ ಇ-ಕಾಮರ್ಸ್ ವೇಗವನ್ನು ಕಂಡು ಅಮೆರಿಕದಂತಹ ದೇಶಗಳಲ್ಲೂ ಇಂತಹ ಸೇವೆ ಲಭ್ಯವಿಲ್ಲವಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

