ನಾವೆಲ್ಲರೂ ಸವಿಯುವ ಗೋಡಂಬಿಯ ಹಿಂದೆ ಒಂದು ನಗರದ ಬೃಹತ್ ಇತಿಹಾಸ ಅಡಗಿದೆ. ವೈಟ್ ಗೋಲ್ಡ್ (ಬಿಳಿ ಚಿನ್ನ) ಎಂದೇ ಕರೆಯಲ್ಪಡುವ ಗೋಡಂಬಿ ಉದ್ಯಮದಲ್ಲಿ ಇಡೀ ವಿಶ್ವದ ಭೂಪಟದಲ್ಲೇ ರಾರಾಜಿಸುತ್ತಿರುವ ನಗರ ನಮ್ಮ ಪಕ್ಕದ ಕೇರಳದ ಕೊಲ್ಲಂ. ದಶಕಗಳಿಂದಲೂ ಜಾಗತಿಕ ಮಟ್ಟದಲ್ಲಿ ಗೋಡಂಬಿ ಉದ್ಯಮವನ್ನು ತನ್ನ ಬೆರಳ ತುದಿಯಲ್ಲಿ ನಿಯಂತ್ರಿಸುತ್ತಿರುವ ಈ ನಗರವನ್ನು ಇಡೀ ಜಗತ್ತು ಈಗ ಕ್ಯಾಶಿವ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್ (ವಿಶ್ವದ ಗೋಡಂಬಿ ರಾಜಧಾನಿ) ಎಂದು ಕರೆಯುತ್ತಿದೆ.
ದಶಕಗಳಿಂದಲೂ ಜಾಗತಿಕ ಗೋಡಂಬಿ ಉದ್ಯಮದಲ್ಲಿ ಮೌನವಾಗಿ, ಆದರೆ ಅತ್ಯಂತ ಪ್ರಭಾವಶಾಲಿ ಪಾತ್ರ ವಹಿಸುತ್ತಾ ಬಂದಿರುವ ನಗರ ನಮ್ಮ ಭಾರತದಲ್ಲಿದೆ. ಕೇರಳದ ಕರಾವಳಿ ತೀರದ ಕೊಲ್ಲಂ (Kollam) ನಗರವು ಇಂದು ಜಗತ್ತಿನಾದ್ಯಂತ ಗೋಡಂಬಿ ರಾಜಧಾನಿ (Cashew Capital of the World) ಎಂದೇ ಪ್ರಸಿದ್ಧವಾಗಿದೆ. ಕಚ್ಚಾ ಗೋಡಂಬಿಯನ್ನು ಅತ್ಯಂತ ನೈಪುಣ್ಯತೆಯಿಂದ ಸಂಸ್ಕರಿಸುವುದರಿಂದ ಹಿಡಿದು, ವಿಶ್ವದ ಮೂಲೆ ಮೂಲೆಗೆ ರಫ್ತು ಮಾಡುವವರೆಗೆ ಈ ನಗರದ ಕೊಡುಗೆ ಅಪಾರ. ಅರಬ್ಬಿ ಸಮುದ್ರದ ದಂಡೆಯಲ್ಲಿರುವ ಈ ಪುಟ್ಟ ನಗರವು ಜಾಗತಿಕ ಗೋಡಂಬಿ ಹಸಿವನ್ನು ನೀಗಿಸುವ ಬೃಹತ್ ಸಂಸ್ಕರಣಾ ಕೇಂದ್ರವಾಗಿ ಹೊರಹೊಮ್ಮಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
ಏನಿದು ಕೊಲ್ಲಂ ನಗರದ ಗೋಡಂಬಿ ಮ್ಯಾಜಿಕ್?
ಕೊಲ್ಲಂ ಕೇವಲ ಒಂದು ಪ್ರವಾಸಿ ತಾಣವಲ್ಲ ಇದು ವಿಶ್ವದ ಗೋಡಂಬಿ ಮಾರುಕಟ್ಟೆಯನ್ನು ತನ್ನ ಬೆರಳ ತುದಿಯಲ್ಲಿ ನಿಯಂತ್ರಿಸುವ ಶಕ್ತಿ ಕೇಂದ್ರ. 20ನೇ ಶತಮಾನದಲ್ಲೇ ಸಂಘಟಿತ ಕಾರ್ಖಾನೆಗಳನ್ನು ಸ್ಥಾಪಿಸಿದ ಇತಿಹಾಸ ಹೊಂದಿರುವ ಈ ನಗರದಲ್ಲಿ ಇಂದು ನೂರಾರು ಸಂಸ್ಕರಣಾ ಘಟಕಗಳಿವೆ. ಒಂದು ಕಾಲದಲ್ಲಿ ವಿಶ್ವದ ಒಟ್ಟು ಗೋಡಂಬಿ ಸಂಸ್ಕರಣೆಯ ಅರ್ಧದಷ್ಟು ಪಾಲು ಈ ನಗರವೊಂದಕ್ಕೇ ಸೇರಿತ್ತು ಎಂದರೆ ನೀವು ಅದರ ವ್ಯಾಪ್ತಿಯನ್ನು ಊಹಿಸಬಹುದು ಇಲ್ಲಿನ ಕರಾವಳಿ ಮತ್ತು ಬಂದರು ಸೌಲಭ್ಯಗಳು ಆಫ್ರಿಕಾದಿಂದ ಕಚ್ಚಾ ಬೀಜಗಳನ್ನು ಆಮದು ಮಾಡಿಕೊಳ್ಳಲು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ವಿದೇಶಗಳಿಗೆ ರವಾನಿಸಲು ವರದಾನವಾಗಿವೆ.
ಮಹಿಳೆಯರೇ ಈ ಉದ್ಯಮದ ಅಸಲಿ ಶಕ್ತಿ ಕೊಲ್ಲಂನ ಈ ಹೆಮ್ಮೆಯ ಉದ್ಯಮಕ್ಕೆ ನಿಜವಾದ ಜೀವ ತುಂಬುತ್ತಿರುವುದು ಇಲ್ಲಿನ ಸಾವಿರಾರು ಮಹಿಳಾ ಕಾರ್ಮಿಕರು. ಅತ್ಯಂತ ನಾಜೂಕಿನಿಂದ ಗೋಡಂಬಿಯ ಗಟ್ಟಿ ಚಿಪ್ಪನ್ನು ಬೇರ್ಪಡಿಸಿ, ಒಂದೂ ಕಾಳು ಹಾನಿಯಾಗದಂತೆ ಸಂಸ್ಕರಿಸುವ ಇವರ ಕೌಶಲ್ಯ ಪ್ರಪಂಚದಲ್ಲೇ ಪ್ರಸಿದ್ಧವಾಗಿದೆ. ಈ ಕುಶಲ ಕಾರ್ಯಪಡೆಯೇ ಕೊಲ್ಲಂನ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಸಾವಿರಾರು ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದೆ. ಹೀಗಾಗಿ, ಇಲ್ಲಿನ ಪ್ರತಿಯೊಂದು ಗೋಡಂಬಿ ಕಾಳಿನ ಹಿಂದೆ ಶ್ರಮಜೀವಿ ಮಹಿಳೆಯರ ಅಪಾರ ಪರಿಶ್ರಮ ಅಡಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕೊಲ್ಲಂ ಹವಾ: ಕೊಲ್ಲಂ ನಗರವು ಕೇವಲ ಭಾರತದ ಗೋಡಂಬಿಯನ್ನಷ್ಟೇ ನಂಬಿಕೊಂಡಿಲ್ಲ. ಜಾಗತಿಕ ವ್ಯಾಪಾರದ ಕೇಂದ್ರವಾಗಿರುವ ಇಲ್ಲಿಗೆ ಆಫ್ರಿಕನ್ ದೇಶಗಳಿಂದಲೂ ಕಚ್ಚಾ ಗೋಡಂಬಿ ಹರಿದು ಬರುತ್ತದೆ. ಇಲ್ಲಿ ಸಂಸ್ಕರಿಸಲ್ಪಟ್ಟ ನಂತರ, ಅವು ಮೇಡ್ ಇನ್ ಇಂಡಿಯಾ ಮುದ್ರೆಯೊಂದಿಗೆ ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಮಾರುಕಟ್ಟೆಗಳನ್ನು ಆಕ್ರಮಿಸಿಕೊಳ್ಳುತ್ತವೆ. ಭಾರತದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಮಹಾರಾಷ್ಟ್ರವಾದರೂ, ಸಂಸ್ಕರಣೆ ಮತ್ತು ರಫ್ತಿನಲ್ಲಿ ಮಾತ್ರ ಕೊಲ್ಲಂ ಇಂದಿಗೂ ಅಜೇಯವಾಗಿ ಉಳಿದಿದೆ.

