ದೆಹಲಿಯ ಪಂಚತಾರಾ ಹೋಟೆಲ್ಗಳಲ್ಲಿ ಒಂದು ದಿನದ ಬಾಡಿಗೆ ಎಷ್ಟಿರಬಹುದು? 10 ಸಾವಿರ, 20 ಸಾವಿರ ಅಥವಾ 50 ಸಾವಿರ ರೂಪಾಯಿ ಎಂದು ನೀವು ಅಂದಾಜಿಸಿದ್ದರೆ ಅದು ತಪ್ಪು! ಒಂದು ವೇಳೆ ನಿಮ್ಮ ಅಂದಾಜು 1 ಲಕ್ಷ ರೂಪಾಯಿಯಾಗಿದ್ದರೂ ಸಹ, ನೀವು ವಾಸ್ತವ ದರಕ್ಕಿಂತ ಬಹಳ ದೂರವಿದ್ದೀರಿ ಎಂದೇ ಅರ್ಥ. ಮುಂದಿನ ಕೆಲವು ದಿನಗಳಲ್ಲಿ ನೀವು ದೆಹಲಿಯ ಐಷಾರಾಮಿ ಹೋಟೆಲ್ಗಳಲ್ಲಿ ರೂಮ್ ಬುಕ್ ಮಾಡಬೇಕೆಂದರೆ ಒಂದು ರಾತ್ರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ವ್ಯಯಿಸಬೇಕಾಗಬಹುದು!
ಹೌದು. ವಿಶೇಷವಾಗಿ ದ ಲೀಲಾ ಪ್ಯಾಲೇಸ್ (The Leela Palace), ಐಟಿಸಿ ಮೌರ್ಯ (ITC Maurya) ಮತ್ತು ತಾಜ್ ಪ್ಯಾಲೇಸ್ (The Taj Palace) ನಂತಹ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಕೆಲವು ಐಷಾರಾಮಿ ಕೆಟಗರಿಯ ರೂಮ್ಗಳ ದರ 4 ರಿಂದ 5 ಲಕ್ಷ ರೂಪಾಯಿ ತಲುಪಿದೆ. ಇಷ್ಟು ಹಣದಲ್ಲಿ ನೀವು ಒಂದು ಹೊಸ ಕಾರನ್ನೇ ಖರೀದಿಸಬಹುದು ಅಥವಾ ದೆಹಲಿ, ನೋಯ್ಡಾ ಸುತ್ತಮುತ್ತ ಒಂದು ಫ್ಲ್ಯಾಟ್ಗೆ ಡೌನ್ ಪೇಮೆಂಟ್ ಮಾಡಬಹುದು. ಆದರೆ, ದೆಹಲಿಯ ಈ ಹೋಟೆಲ್ಗಳ ದರ ಇಷ್ಟೊಂದು ಏರಿಕೆಯಾಗಲು ಒಂದು ಬಲವಾದ ಕಾರಣವಿದೆ.
ರೂಮ್ ಬಾಡಿಗೆ 5 ಲಕ್ಷಕ್ಕೇರಲು ಕಾರಣವೇನು?
ದೆಹಲಿಯಲ್ಲಿ ಹೋಟೆಲ್ ದರಗಳು ಆಕಾಶ ಮುಟ್ಟಲು ಮುಖ್ಯ ಕಾರಣವೆಂದರೆ ‘ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026’ (India AI Impact Summit 2026). ಫೆಬ್ರವರಿ 16 ರಿಂದ 20 ರವರೆಗೆ ದೆಹಲಿಯ ‘ಭಾರತ ಮಂಟಪಂ’ನಲ್ಲಿ ಈ ಬೃಹತ್ ಸಮ್ಮೇಳನ ನಡೆಯಲಿದೆ. ಇದರಲ್ಲಿ ಭಾಗವಹಿಸಲು ವಿಶ್ವದಾದ್ಯಂತದ ವಿದೇಶಿ ಗಣ್ಯರು, ತಜ್ಞರು ಮತ್ತು ತಂತ್ರಜ್ಞಾನ ಕ್ಷೇತ್ರದ ನಾಯಕರು ಆಗಮಿಸುತ್ತಿದ್ದಾರೆ. ಈ ಇವೆಂಟ್ ಸಲುವಾಗಿ ಈಗಾಗಲೇ 35,000ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ನವದೆಹಲಿಯ ಬಹುತೇಕ ಹೋಟೆಲ್ಗಳು ಫುಲ್ ಆಗುತ್ತಿವೆ.
20-40 ಸಾವಿರವಿದ್ದ ರೂಮ್ಗಳಿಗೆ ಈಗ ಲಕ್ಷಗಳ ಬೆಲೆ!
ಸಾಮಾನ್ಯವಾಗಿ ಒಂದು ರಾತ್ರಿಗೆ 20,000 ದಿಂದ 40,000 ರೂಪಾಯಿ ಇರುತ್ತಿದ್ದ ರೂಮ್ಗಳು ಈಗ ಹಲವು ಪಟ್ಟು ದುಬಾರಿಯಾಗಿವೆ. ಟ್ರಾವೆಲ್ ವೆಬ್ಸೈಟ್ಗಳ ಮಾಹಿತಿಯಂತೆ, ಫೆಬ್ರವರಿ 19 ಮತ್ತು 20 ರಂದು ರೂಮ್ಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ದರಗಳು ಲಕ್ಷಗಳಲ್ಲಿವೆ. ಕೆಲವು ಹೈ-ಎಂಡ್ ಸೂಟ್ ರೂಮ್ಗಳಿಗೆ ಕನಿಷ್ಠ 4 ರಿಂದ 5 ಲಕ್ಷ ರೂ. ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಕೆಲವು ಹೋಟೆಲ್ಗಳು ಕನಿಷ್ಠ ಇಂತಿಷ್ಟು ದಿನ ಉಳಿಯಲೇಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳನ್ನೂ ಹಾಕಿವೆ.
ದರ ಪಟ್ಟಿ
ದ ಇಂಪೀರಿಯಲ್ (ಕನಾಟ್ ಪ್ಲೇಸ್): 2.4 ಲಕ್ಷ ರೂ. ಪ್ರತಿ ರಾತ್ರಿಗೆ.
ರ್ಯಾಡಿಸನ್ ಬ್ಲೂ: 1.1 ಲಕ್ಷ ರೂ. ಪ್ರತಿ ರಾತ್ರಿಗೆ.
ಶಾಲೋಮ ಶಾಂಘ್ರಿ-ಲಾ, ದ ಪಾರ್ಕ್: ಈಗಾಗಲೇ ಬಹುತೇಕ ಕೊಠಡಿಗಳು ಬುಕ್ ಆಗಿವೆ.
ವಿಶ್ವದ ಅತಿದೊಡ್ಡ AI ಸಮ್ಮೇಳನವಿದು !
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನ ‘AI ಆಕ್ಷನ್ ಸಮ್ಮಿಟ್’ ವೇಳೆ ಈ ಸಮ್ಮೇಳನವನ್ನು ಘೋಷಿಸಿದ್ದರು. ಇದು ‘ಗ್ಲೋಬಲ್ ಸೌತ್’ನಲ್ಲಿ ನಡೆಯುತ್ತಿರುವ ಮೊದಲ ಬೃಹತ್ AI ಸಮ್ಮೇಳನವಾಗಿದೆ. ಇದರಲ್ಲಿ 100 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯಿದೆ. 15-20 ದೇಶಗಳ ರಾಷ್ಟ್ರ ಮುಖ್ಯಸ್ಥರು ಮತ್ತು 50 ಕ್ಕೂ ಹೆಚ್ಚು ಸಚಿವರ ಆಗಮನವಾಗಲಿದೆ.ಜಾಗತಿಕ ಮತ್ತು ಭಾರತೀಯ ಕಂಪನಿಗಳ 40 ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ವಿಶ್ವದ ಹೆಸರಾಂತ 500 ಕ್ಕೂ ಹೆಚ್ಚು ಇನ್ನೋವೇಟರ್ಗಳು ಮತ್ತು ತಂತ್ರಜ್ಞಾನ ಅಧಿಕಾರಿಗಳು (CTO) ಭಾಗವಹಿಸಲಿದ್ದಾರೆ.
ಟ್ರಾವೆಲ್ ಪೋರ್ಟಲ್ ‘EasyGo’ ಸಿಇಒ ಅಲೋಕ್ ಬಾಜಪೇಯಿ ಅವರ ಪ್ರಕಾರ, ಫೆಬ್ರವರಿ 16-20 ರ ಅವಧಿಯಲ್ಲಿ ದೆಹಲಿ-ಎನ್ಸಿಆರ್ನ ಪಂಚತಾರಾ ಹೋಟೆಲ್ಗಳ ದರಗಳು 1 ಲಕ್ಷ ರೂಪಾಯಿಗಿಂತಲೂ ಹೆಚ್ಚಿವೆ. ಇದು ಹೋಟೆಲ್ ಉದ್ಯಮದ ಮೇಲೆ AI ಸಮ್ಮೇಳನದ ಪ್ರಭಾವವನ್ನು ತೋರಿಸುತ್ತದೆ.

