ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿ, ಬಳಿಕ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣದ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ರಂಗೇರಿದ ದಾವಣಗೆರೆ ದಕ್ಷಿಣದ ಉಪ ಚುನಾವಣೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮುಸ್ಲಿಮರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಟಿಕೆಟ್ ಪಡೆದಷ್ಟು ಸುಲಭವಾಗಿ ಚುನಾವಣೆ ಗೆಲ್ಲಲಾಗುವುದಿಲ್ಲ. ಬಿಜೆಪಿಯ ಶ್ರೀನಿವಾಸ್ ದಾಸಕರಿಯಪ್ಪ, ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಅಖಾಡದಲ್ಲಿದ್ದು, ಮತಗಳು ಹಂಚಿ ಹೋಗಲಿವೆ.
ಉಪ ಚುನಾವಣೆ ಟಿಕೆಟ್ ಸಿಕ್ಕಿಲ್ಲ ಎಂಬ ಅಸಮಾಧಾನ ಮುಸ್ಲಿಮರಲ್ಲಿ ಇದ್ದರೆ ಅವರು ಎಸ್‌ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಬೆಂಬಲಿಸಬಹುದು. ಆದರೆ ಸಾದಿಕ್ ಪೈಲ್ವಾನ್ ಮನವೊಲಿಕೆ ಮಾಡುತ್ತೇವೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸಮರ್ಥ್ ಶಾಮನೂರು ಪರವಾಗಿರುವ ಅಂಶಗಳು
- ಸಮರ್ಥ್ ಶಾಮನೂರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪುತ್ರ.
- ಶಾಮನೂರು ಶಿವಶಂಕರಪ್ಪ ಮೊಮ್ಮಗ.
- 4 ಬಾರಿ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆದ್ದಿದ್ದು, ಕ್ಷೇತ್ರ ಪಕ್ಷದ ಭದ್ರಕೋಟೆ.
- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದು, ಉಪ ಚುನಾವಣೆಗೆ ಅನುಕೂಲ.
- ಶಾಮನೂರು ಶಿವಶಂಕರಪ್ಪ ನಿಧನದ ಅನುಕಂಪ.
ಸಮರ್ಥ್ ಶಾಮನೂರು ವಿರುದ್ಧವಾಗಿರುವ ಅಂಶಗಳು
- ಸಮರ್ಥ್ ಬದಲು ಟಿಕೆಟ್ ಕೇಳಿದ್ದ ಮುಸ್ಲಿಂ ಸಮುದಾಯದ ನಾಯಕರು.
- ಕುಟುಂಬದಲ್ಲಿ ಈಗಾಗಲೇ ಒಬ್ಬರು ಸಚಿವರು, ಒಬ್ಬರು ಸಂಸದರು ಇರುವುದು.
- ಕುಟುಂಬ ರಾಜಕೀಯದ ಆರೋಪಗಳು.
- ಸಮರ್ಥ್ ಶಾಮನೂರು ಇನ್ನೂ ಚಿಕ್ಕ ಹುಡುಗ ಎಂಬ ಅಂಶ.
- ಎಸ್‌ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ಮತ ವಿಭಜನೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23ರ ಸೋಮವಾರ ಕೊನೆಯ ದಿನವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿರುವ ನಾಯಕರನ್ನು ಸಮಾಧಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 26 ಅಂತಿಮ ದಿನವಾಗಿದೆ.

