ಬೆಂಗಳೂರು: ಸಾರ್ವಜನಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು ಎಂದು ರಾಜ್ಯದ ಪೊಲೀಸರಿಗೆ ಡಿಜಿ ಐಜಿಪಿ ಡಾ.ಎಂ.ಎ. ಸಲೀಂ ಮಹತ್ವದ ಸೂಚನೆ ನೀಡಿದ್ದಾರೆ.
ಜನರ ಜೊತೆಗೆ ಪೊಲೀಸರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದಾರೆ. ಸಮಾಜದಲ್ಲಿ ಪೊಲೀಸ್ ಇಲಾಖೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಬೇಕು. ಪಾರದರ್ಶಕತೆ, ಸೌಜನ್ಯದ ವರ್ತನೆ, ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಪೊಲೀಸರ ನಡವಳಿಕೆಯಲ್ಲಿ ಸೌಜನ್ಯ ಮತ್ತು ಘನತೆ ಎದ್ದು ಕಾಣಬೇಕು. ಸಾರ್ವಜನಿಕರ ಮೇಲೆ ಬಲ ಪ್ರಯೋಗ ಮಾಡುವುದು ಅಥವಾ ದರ್ಪದಿಂದ ವರ್ತಿಸುವುದು ಇಲಾಖೆಯ ಘನತೆಗೆ ತಕ್ಕನಾದ ನಡವಳಿಕೆಯಲ್ಲ. ಹಕ್ಕುಗಳಿಗೆ ಗೌರವ ನೀಡಬೇಕು ಮತ್ತು ಸಂಯಮದಿಂದ ವರ್ತಿಸಬೇಕು. ಇದು ಇಲಾಖೆಯ ಘನತೆ ಹೆಚ್ಚಿಸಿ ಜನರಲ್ಲಿ ಗೌರವ ಮೂಡುವಂತೆ ಮಾಡುತ್ತದೆ ಎಂದು ಡಿಜಿ ಐಜಿಪಿ ಸಲೀಂ ಅವರು ಪೊಲೀಸರಿಗೆ ಮಾರ್ಗಸೂಚಿ ಹೊರಡಿಸಿದ್ದಾರೆ.
