ನವದೆಹಲಿ: ಮಸೂದೆಗೆ ಅಂಕಿತ ಹಾಕುವ ವಿಷಯದಲ್ಲಿ ಸ್ವತಃ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಡೆಡ್ ಲೈನ್ ವಿಧಿಸುವ ಮೂಲಕ ದೇಶದ ನ್ಯಾಯಾಂಗ ಮತ್ತು ಶಾಸಕಾಂಗ ಇತಿಹಾಸದಲ್ಲಿಯೇ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಸೂದೆಗೆ ಸಹಿ ಹಾಕಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಲಾಗಿದ್ದು, ಮೂರು ತಿಂಗಳಲ್ಲಿ ನಿರ್ಧರಿಸದಿದ್ದರೆ ಕಾರಣ ಕಡ್ಡಾಯವಾಗಿದೆ. ಇಲ್ಲವಾದಲ್ಲಿ ರಾಜ್ಯ ಕೋರ್ಟ್ ಗೆ ದೂರಬಹುದು ಎಂದು ಹೇಳಲಾಗಿದೆ.
ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು, ರಾಷ್ಟ್ರಪತಿ ಸಹಿ ಹಾಕಲು ವಿಳಂಬ ಮಾಡುವ ವಿಷಯ ಅನೇಕ ದಶಕಗಳಿಂದ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಾಂವಿಧಾನಿಕ ಮಹತ್ವದ ಹುದ್ದೆಗಳ ಅಧಿಕಾರದ ಕುರಿತ ಗೊಂದಲಗಳಿಗೆ ಇತ್ತೀಚಿಗೆ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ಜಟಾಪಟಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ತೆರೆ ಇಳಿದಿದೆ.
ರಾಜ್ಯಪಾಲರು ಮಾತ್ರವಲ್ಲ, ಯಾವುದೇ ವಿಧೇಯಕಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ರಾಜ್ಯಪಾಲರು, ರಾಷ್ಟ್ರಪತಿಗಳ ಬಳಿ ಕಳುಹಿಸಿ ಕೊಡುವ ವಿಧೇಯಕದ ಕುರಿತು ಮೂರು ತಿಂಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯಗಳು ಕೋರ್ಟ್ ಮೆಟ್ಟಿಲೇರಬಹುದು ಎಂದು ಹೇಳಲಾಗಿದೆ.
ಸುಪ್ರೀಂಕೋರ್ಟ್ ಇಂತಹ ಆದೇಶ ನೀಡಿದ್ದು ಇದೇ ಮೊದಲು. ರಾಜ್ಯಪಾಲರು ಕಳುಹಿಸಿದ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಬಹುದು ಅಥವಾ ತಡೆ ಹಿಡಿಯಬಹುದು. ಅಂಕಿತ ಹಾಕಲು ಕಾಲಮಿತಿ ನಿಗದಿ ಮಾಡಿಲ್ಲವಾದರೂ ರಾಜ್ಯಪಾಲರ ರೀತಿ ರಾಷ್ಟ್ರಪತಿಗಳು ಕೂಡ ವಿಟೋ ಅಧಿಕಾರ ಹೊಂದಿಲ್ಲ. ಒಂದು ವೇಳೆ ಮೂರು ತಿಂಗಳಲ್ಲಿ ರಾಷ್ಟ್ರಪತಿಗಳು ವಿಧೇಯಕಕ್ಕೆ ಅಂಗೀಕಾರ ನೀಡದೆ ಇದ್ದಲ್ಲಿ ರಾಜ್ಯಗಳು ಕೋರ್ಟ್ ಮೆಟ್ಟಿಲೇರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.