ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿಯೇ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಹರಡಿತ್ತು. ಇಮ್ರಾನ್ ಖಾನ್ ಮೃತದೇಹ ಎನ್ನಲಾದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇಮ್ರಾನ್ ಖಾನ್ ಕುಟುಂಬಸ್ಥರು, ಕಾರ್ಯಕರ್ತರು ಅಡಿಯಾಲಾ ಜೈಲಿನ ಬಳಿ ಭೇಟಿಗೆ ತೆರಳಿದರೂ ಭೇಟಿಗೆ ಅವಕಾಶ ನೀಡಿರಲಿಲ್ಲ. ಪಾಕಿಸ್ತಾನ ಸರ್ಕಾರ ಕೂಡ ಇಮ್ರಾನ ಖಾನ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ಪಿಟಿಐ ಕಾರ್ಯಕರ್ತರು ಜೈಲಿನ ಬಳಿ ಜಮಾವಣೆಗೊಂಡು ಪ್ರತಿಭಟನೆ ತೀವ್ರಗೊಳಿಸಿದ್ದರು. ಈ ಘಟನೆಗಳ ಬಳಿಕ ಇದೀಗ ಪಾಕಿಸ್ತಾನ ಸರ್ಕಾರ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಯಾರಿಗೂ ಅವರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಅಡಿಯಾಲ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಎದ್ದಿರುವ ಸುದ್ದಿಗಳು ಹಾಗೂ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಆಧಾರರಹಿತ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ವಾರ ಕುಟುಂಬ ಸದಸ್ಯರಿಗೆ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಿನ ಬಳಿ ಜಮಾವಣೆಗೊಂಡಿದ್ದ ಜನರು ಧರಣಿ ಹಿಂಪಡೆದಿದ್ದಾರೆ ಎನ್ನಲಾಗಿದೆ.
