ಉಡುಪಿ: ವಿದೇಶದಿಂದ ಆಮದು ಮಾಡಿಕೊಂಡ ಐಷಾರಾಮಿ ಮರ್ಸಿಡೆಸ್ ಬೆಂಜ್ ಕಾರ್ ಅನ್ನು ಅಕ್ರಮವಾಗಿ ನೋಂದಣಿ ಮಾಡುವ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಲ್ಲಿ ಬಂದ ವರದಿ ಆಧಾರದಲ್ಲಿ ಮಾಹಿತಿ ಕಲೆ ಹಾಕಿದ ಲೋಕಾಯುಕ್ತ ಪೊಲೀಸರು ಸಂಬಂಧಿಸಿದ ದಾಖಲಾತಿ ಪಡೆದು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಾಖಲೆಗಳ ಪರಿಶೀಲಿಸಿದ್ದಾರೆ. ತನಿಖೆಯ ವೇಳೆ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಮರ್ಸಿಡೆಸ್ ಬೆಂಜ್ ಕಾರ್ ನ ಮೂಲ ಮಾಡೆಲ್ ಮಾಹಿತಿಯನ್ನು ಬದಲಾವಣೆ ಮಾಡಿ ಅದೇ ಕಂಪನಿಯ ಕಡಿಮೆ ಬೆಲೆಯ ಕಾರ್ ನ ಮಾಡೆಲ್ ಎಂದು ದಾಖಲೆಗಳಲ್ಲಿ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗೆ ನಷ್ಟ ಉಂಟು ಮಾಡಿರುವುದು ಪ್ರಾಥಮಿಕ ವಿಚಾರಣೆಯ ವೇಳೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ. ಉಡುಪಿ ಮತ್ತು ಮಂಗಳೂರು ಸಾರಿಗೆ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲಿನ ಆರೋಪ ದೃಢಪಟ್ಟಿದ್ದು, ಮೇಲಾಧಿಕಾರಿಗಳ ಅನುಮತಿ ಪಡೆದು ನವೆಂಬರ್ 17ರಂದು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
