HomeLatest News'ಕಮರ್ಷಿಯಲ್ ಸೆಕ್ಸ್ ಟ್ರಾಫಿಕಿಂಗ್ ಬಲಿಪಶುಗಳು ಅಪ್ರಾಪ್ತ ವಯಸ್ಕರಾಗಿದ್ದರೆ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆ ಅನ್ವಯಿಸುತ್ತದೆ' :...

‘ಕಮರ್ಷಿಯಲ್ ಸೆಕ್ಸ್ ಟ್ರಾಫಿಕಿಂಗ್ ಬಲಿಪಶುಗಳು ಅಪ್ರಾಪ್ತ ವಯಸ್ಕರಾಗಿದ್ದರೆ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆ ಅನ್ವಯಿಸುತ್ತದೆ’ : ಸುಪ್ರೀಂಕೋರ್ಟ್

ಹಣ ಸಂಪಾದನೆಯೇ ಗುರಿಯಾಗಿ ಅಪ್ರಾಪ್ತವಯಸ್ಕರನ್ನು ಲೈಂಗಿಕ ಶೋಷಣೆಗೆ ಒಳಪಡಿಸುವ ಮಾನವ ಕಳ್ಳಸಾಗಣೆದಾರರ ಮೇಲೆ ‘ಪೋಕ್ಸೋ’ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕಮರ್ಷಿಯಲ್ ಸೆಕ್ಸ್ ಟ್ರಾಫಿಕಿಂಗ್ ಪ್ರಕರಣಗಳಲ್ಲಿ ಬಲಿಪಶುಗಳು ಅಪ್ರಾಪ್ತರಾಗಿದ್ದರೆ, ಆರೋಪಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆ (ITPA) ಜೊತೆಗೆ ಅತ್ಯಂತ ಕಠಿಣವಾದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಮತ್ತು ಲೈಂಗಿಕ ಶೋಷಣೆಗೆ ಒಳಗಾದವರನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ‘ಪ್ರಜ್ವಲ’ ಎಂಬ ಎನ್‌ಜಿಒ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠ ನಡೆಸಿತು.

  • ಪೋಕ್ಸೋ ಅನ್ವಯ: ಲೈಂಗಿಕ ಶೋಷಣೆಗಾಗಿ ನಡೆಯುವ ಕಳ್ಳಸಾಗಣೆಯಲ್ಲಿ ಬಲಿಪಶುಗಳು ಮಕ್ಕಳಾಗಿದ್ದರೆ, ಪೋಕ್ಸೋ ಕಾಯ್ದೆಯ ನಿಬಂಧನೆಗಳು ಖಂಡಿತವಾಗಿಯೂ ಅನ್ವಯಿಸುತ್ತವೆ. ಇದರೊಂದಿಗೆ ಬಿಎನ್‌ಎಸ್‌ನ ಸೆಕ್ಷನ್ 143, 144 ಮತ್ತು ಐಟಿಪಿಎ ನಿಯಮಗಳು ಕೂಡ ಅನ್ವಯವಾಗುತ್ತವೆ ಎಂದು ಪೀಠ ಹೇಳಿದೆ.
  • ಬಲಿಪಶುವಿನ ಒಪ್ಪಿಗೆಗೆ ಮೌಲ್ಯವಿಲ್ಲ: ಅಪ್ರಾಪ್ತರನ್ನು ಲೈಂಗಿಕ ಕಳ್ಳಸಾಗಣೆಗೆ ಒಳಪಡಿಸಿದಾಗ, ಬಲಿಪಶುಗಳ ಸಮ್ಮತಿ ಅಥವಾ ಒಪ್ಪಿಗೆಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಅವರ ಬಳಿ ಹೇಗೆ ಕೆಲಸ ಮಾಡಿಸಲಾಯಿತು ಎಂಬುದಕ್ಕಿಂತ, ಅಪರಾಧಿಯ ಕೃತ್ಯ ಮತ್ತು ಉದ್ದೇಶವೇ ಮುಖ್ಯವೆಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
  • ತಪ್ಪು ದಾರಿಗೆ ಎಳೆಯುವ ತಂತ್ರ: ಓರ್ವ ಮಹಿಳೆ ಅಥವಾ ಬಾಲಕಿ ತಾವು ಲೈಂಗಿಕ ಉದ್ಯಮದಲ್ಲಿದ್ದೇವೆ ಎಂದು ತಿಳಿದಿದ್ದರೂ ಸಹ, ಅವರು ಮಾನವ ಕಳ್ಳಸಾಗಣೆಯ ಬಲಿಪಶುಗಳಲ್ಲ ಎಂದು ಅರ್ಥವಲ್ಲ. ಕೆಲಸದ ಬಗ್ಗೆ ಆರಂಭದಲ್ಲಿ ತಪ್ಪು ಮಾಹಿತಿ ನೀಡಿ, ಮೋಸದಿಂದ ಅವರನ್ನು ಈ ಜಾಲಕ್ಕೆ ಎಳೆದಿರಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
  • ಅಪ್ರಾಪ್ತರ ರಕ್ಷಣೆ: ಭಾರತೀಯ ಕಾನೂನಿನ ಪ್ರಕಾರ, ಮಕ್ಕಳ ಮೇಲೆ ನಡೆಯುವ ಪ್ರತಿಯೊಂದು ಲೈಂಗಿಕ ಶೋಷಣೆಯೂ ಅವರ ಒಪ್ಪಿಗೆ ಇಲ್ಲದೆ ನಡೆದ ಕೃತ್ಯ ಎಂದೇ ಪರಿಗಣಿಸಲಾಗುತ್ತದೆ. ಪೋಕ್ಸೋ ಕಾಯ್ದೆಯು ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತು ಮಕ್ಕಳ ಲೈಂಗಿಕ ದುರ್ಬಳಕೆಯಂತಹ ಹಲವು ಗಂಭೀರ ಅಪರಾಧಗಳನ್ನು ಒಳಗೊಂಡಿದೆ.

ಪುನರ್ವಸತಿ ಅತ್ಯಗತ್ಯ: ಬಲಿಪಶುಗಳ ಪುನರ್ವಸತಿಯು ಅತ್ಯಂತ ಮುಖ್ಯವಾದುದು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಸಾಂಸ್ಥಿಕ ಬೆಂಬಲವಿಲ್ಲದಿದ್ದರೆ, ಈ ಶೋಷಣೆಯ ಜಾಲದಿಂದ ಹೊರಬಂದವರು ಮತ್ತೆ ಅದೇ ದುರ್ಬಲ ಪರಿಸ್ಥಿತಿಗೆ ಮರಳುವ ಸಾಧ್ಯತೆಯಿದೆ. ಸಂವಿಧಾನದ ವಿಧಿ 21 ಮತ್ತು 23ರ ಅಡಿ ನೀಡಲಾದ ರಕ್ಷಣೆಯನ್ನು ಖಾತರಿಪಡಿಸಲು ಅರ್ಥಪೂರ್ಣ ಪುನರ್ವಸತಿ ಅಗತ್ಯವೆಂದು ನ್ಯಾಯಾಲಯ ಎಚ್ಚರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular