ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ, ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ಸಟ್ಲಜ್ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ದಿಢೀರ್ ನಾಪತ್ತೆಯಾಗಿದೆ. ಜುಲೈ 3 ರಂದು ಪ್ರಸಾರ ಆರಂಭಿಸಿದ್ದ ಈ ಚಿತ್ರವನ್ನು ಜುಲೈ 5 ರ ಭಾನುವಾರ ಸಂಜೆ ಭಾರತದಲ್ಲಿ ಜೀ5 ಪ್ಲಾಟ್‌ಫಾರ್ಮ್‌ನಿಂದ ಏಕಾಏಕಿ ತೆಗೆದುಹಾಕಲಾಗಿದೆ. ಈ ನಡೆ ಈಗ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದ ಸಹ-ಲೇಖಕ ನಿರೇನ್ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಂಜಾಬ್ 95 ಎಂಬ ಹೆಸರಿದ್ದ ಈ ಸಿನಿಮಾ ಸೆನ್ಸಾರ್ ಮಂಡಳಿಯ ಒಪ್ಪಿಗೆಗಾಗಿ 2022 ರಿಂದಲೇ ಅಂದರೆ ಸುಮಾರು ನಾಲ್ಕು ವರ್ಷಗಳಿಂದ ಕಾಯುತ್ತಿತ್ತು. ಈಗ ಒಟಿಟಿಯಲ್ಲಿ ಬಿಡುಗಡೆಯಾದ ತಕ್ಷಣವೇ ಇದನ್ನು ಹಿಂಪಡೆದಿರುವುದರ ಹಿಂದೆ ಸೆನ್ಸಾರ್ ಮಂಡಳಿ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರ ಹಸ್ತಕ್ಷೇಪವಿದೆ ಎಂದು ಚಿತ್ರತಂಡ ಅನುಮಾನ ವ್ಯಕ್ತಪಡಿಸಿದೆ.
ವ್ಯವಸ್ಥೆಯ ವಿರುದ್ಧ ಲೇಖಕ ನಿರೇನ್ ಭಟ್ ಆಕ್ರೋಶ
ಸಿನಿಮಾ ತೆಗೆದುಹಾಕಿರುವುದರ ಕುರಿತು ಮಾತನಾಡಿದ ಸಹ-ಲೇಖಕ ನಿರೇನ್ ಭಟ್, ವ್ಯವಸ್ಥೆಯಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಈ ಚಿತ್ರದ ಬಗ್ಗೆ ತೀವ್ರ ಆಕ್ಷೇಪವಿರುವಂತೆ ಕಾಣುತ್ತಿದೆ. ಆದರೆ ಅಸಲಿ ಸಮಸ್ಯೆಯೆಂದರೆ ನಮ್ಮೊಂದಿಗೆ ಯಾರೂ ಯಾವುದೇ ಅಧಿಕೃತ ಸಂವಹನ ನಡೆಸುತ್ತಿಲ್ಲ. ಚಿತ್ರದ ಯಾವ ಭಾಗಕ್ಕೆ ಅವರ ಆಕ್ಷೇಪವಿದೆ ಅಥವಾ ಯಾರು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಸೆನ್ಸಾರ್ ಮಂಡಳಿ ಸಂಪೂರ್ಣ ಮೌನ ವಹಿಸಿದೆ ಎಂದು ಬೇಸರ ಹೊರಹಾಕಿದ್ದಾರೆ. ಪ್ರಸ್ತುತ ವಿದ್ಯಮಾನಗಳ ಕಾರಣಕ್ಕೆ ಸಿನಿಮಾ ಸ್ಥಗಿತಗೊಳಿಸಲಾಗಿದೆ ಎಂದು ಜೀ5 ಹೇಳಿದೆಯಾದರೂ, ಆ ವಿದ್ಯಮಾನಗಳು ಏನೆಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ್ ಫೈಲ್ಸ್ ಚಿತ್ರದ ಪ್ರಸ್ತಾಪ
ದೇಶದಲ್ಲಿ ದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿ ನಂತಹ ಸಿನಿಮಾಗಳು ಯಾವುದೇ ಅಡ್ಡಿಯಿಲ್ಲದೆ ಪ್ರದರ್ಶನಗೊಳ್ಳಲು ಸಾಧ್ಯವಿರುವಾಗ, ನಮ್ಮ ಸಿನಿಮಾವನ್ನು ಮಾತ್ರ ಯಾಕೆ ಗುರಿ ಮಾಡಲಾಗುತ್ತಿದೆ ಎಂದು ನಿರೇನ್ ಭಟ್ ಪ್ರಶ್ನಿಸಿದ್ದಾರೆ. ಕೇವಲ ಕಾಲ್ಪನಿಕ ಮತ್ತು ಆಧಾರರಹಿತ ಆತಂಕಗಳನ್ನು ಮುಂದಿಟ್ಟುಕೊಂಡು ಒಂದು ನೈಜ ಜೀವನ ಚರಿತ್ರೆಯ ಸಿನಿಮಾವನ್ನು ಹತ್ತಿಕ್ಕುವುದು ಸರಿಯಲ್ಲ. ಚಿತ್ರಗಳನ್ನು ಬ್ಯಾನ್ ಮಾಡುವುದರಿಂದ ಜನರ ಕುತೂಹಲ ಮತ್ತಷ್ಟು ಹೆಚ್ಚುತ್ತದೆಯೇ ವಿನಃ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಸಿನಿಮಾ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಇದರ ಪ್ರದರ್ಶನಕ್ಕೆ ತಡೆ ಒಡ್ಡಲಾಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಲು ಚಿತ್ರತಂಡದ ನಿರ್ಧಾರ
ಸಿನಿಮಾವನ್ನು ತಡೆದಿರುವ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ಚಿತ್ರತಂಡ ಸಜ್ಜಾಗಿದೆ. ಈ ಹಿಂದೆ ಉಡ್ತಾ ಪಂಜಾಬ್ ಸಿನಿಮಾ ಬಿಡುಗಡೆಯ ಸಂದರ್ಭದಲ್ಲೂ ಸೆನ್ಸಾರ್ ಮಂಡಳಿ 94 ಕಟ್‌ಗಳನ್ನು ಸೂಚಿಸಿತ್ತು. ಆದರೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿ ಕೇವಲ ಒಂದೇ ಒಂದು ಕಟ್‌ನೊಂದಿಗೆ ಸಿನಿಮಾ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಈ ಬಾರಿಯೂ ನಮಗೆ ನ್ಯಾಯ ಸಿಗಲಿದ್ದು, ಸಟ್ಲಜ್ ಸಿನಿಮಾ ಶೀಘ್ರದಲ್ಲೇ ಒಟಿಟಿಗೆ ಮರಳಲಿದೆ ಎಂಬ ವಿಶ್ವಾಸವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ. ಸದ್ಯ ಭಾರತದಲ್ಲಿ ಈ ಚಿತ್ರದ ಪ್ರಸಾರ ನಿಂತಿದ್ದರೂ, ವಿದೇಶಗಳಲ್ಲಿ ಜೀ5 ಗ್ಲೋಬಲ್ ಮೂಲಕ ವೀಕ್ಷಣೆಗೆ ಲಭ್ಯವಿದೆ.

