ಬೆಂಗಳೂರು: ಆರ್.ಎಸ್.ಎಸ್. ಒಂದು ದೆವ್ವವಾದರೆ ಬಿಜೆಪಿ ಅದರ ನೆರಳು. ನಾವು ನೆರಳಿನ ಜೊತೆಗೆ ಗುದ್ದಾಡುತ್ತಿದ್ದೇವೆ. ದೆವ್ವದ ಜೊತೆಗೆ ಗುದ್ದಾಡಿದರೆ ದೇಶ ಉದ್ಧಾರವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನ ಗಾಂಧಿ ಭವನ ಸಭಾಂಗಣದಲ್ಲಿ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ ಕಣ್ಣೀರು’(ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾನು ಈಗ ಆರ್.ಎಸ್.ಎಸ್. ಬಗ್ಗೆ ಸ್ವಲ್ಪ ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ಆರ್.ಎಸ್.ಎಸ್.ನವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಅವರಲ್ಲಿ ಉತ್ತರವೇ ಇಲ್ಲ. ಆರ್.ಎಸ್.ಎಸ್. ಅನ್ನು ನೋಂದಣಿ ಮಾಡಿಸಬೇಕು ಎಂದು ಹೇಳಿದರೆ ನೋಂದಣಿ ಮಾಡಿಸುವಾಗ ಅಗತ್ಯವಿಲ್ಲ. ನಮ್ಮದು ವ್ಯಕ್ತಿಗಳ ಸಂಸ್ಥೆ ಎಂದು ಆರ್.ಎಸ್.ಎಸ್. ಮುಖ್ಯಸ್ಥ ಭಾಗವತ್ ಹೇಳುತ್ತಾರೆ. ಬೆಂಗಳೂರು ಕ್ಲಬ್ ಕೂಡ ವ್ಯಕ್ತಿಗಳ ಸಂಸ್ಥೆಯಾಗಿದೆ. ಅದು ಕೂಡ ತೆರಿಗೆ ಮತ್ತು ಸಂವಿಧಾನದ ವ್ಯಾಪ್ತಿಗೆ ಬರುತ್ತದೆ. ಇವತ್ತಲ್ಲ ನಾಳೆ ಆರ್.ಎಸ್.ಎಸ್. ನೋಂದಣಿ ಆಗಲೇಬೇಕು. ನಾನು ನೋಂದಣಿ ಮಾಡಿಸುತ್ತೇನೆ ಎಂದಿದ್ದಾರೆ.
ಕಾನೂನು ಮತ್ತು ಸಂವಿಧಾನ ಪರವಾಗಿದ್ದರೆ, ರಾಜಕೀಯ ಇಚ್ಛಾಶಕ್ತಿ ಹೊಂದಿದ್ದರೆ ಯಾರೂ ಕೋಮುವಾದಿ ಸಂಘಟನೆ ಬಗ್ಗಿಸಬಹುದು. ಆರ್.ಎಸ್.ಎಸ್. 2500 ಸಂಘಟನೆಗಳ ನೆಟ್ವರ್ಕ್ ಹೊಂದಿದೆ. ಅಮೆರಿಕ, ಇಂಗ್ಲೆಂಡ್ ನಿಂದ ದುಡ್ಡು ತೆಗೆದುಕೊಳ್ಳುತ್ತದೆ. ಅದರ ಹಿಂದೆ ದೊಡ್ಡ ಮನಿ ಲಾಂಡರಿಂಗ್ ಇದೆ. ನಾವು ಯಾರ ಬಳಿಯೂ ದೇಣಿಗೆ ಪಡೆಯುವುದಿಲ್ಲ. ಗುರುದಕ್ಷಿಣೆ ತೆಗೆದುಕೊಳ್ಳುತ್ತೇವೆ ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಗುರು ಎಂದರೆ ಧ್ವಜ. ಧ್ವಜದ ಹೆಸರಿನಲ್ಲಿ ಹಣ ತೆಗೆದುಕೊಳ್ಳುತ್ತಾರೆ. ನಾಳೆ ನಾನು ಕೂಡ ನೀಲಿ ಧ್ವಜ ಹಾಕಿ ಅದರ ಹೆಸರಿನಲ್ಲಿ ದುಡ್ಡು ತೆಗೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಧರ್ಮ ಉಳಿಸಲು ಮೂರು ಮಕ್ಕಳನ್ನು ಹೆರಬೇಕು ಎನ್ನುವ ಮೋಹನ್ ಭಾಗವತ್ ಮದುವೆಯಾಗಿಲ್ಲ. ಬಿಜೆಪಿಯವರು ಹೊರಗೊಂದು, ಒಳಗೊಂದು ಮಾತುಗಳನ್ನು ಹೇಳಿ ಬಡವರ ಮಕ್ಕಳನ್ನು ಬೀದಿ ಪಾಲು ಮಾಡುತ್ತಿದ್ದಾರೆ. ಆರ್.ಎಸ್.ಎಸ್. ಇಲ್ಲದಿದ್ದರೆ ಜೆಡಿಎಸ್ ಗಿಂತಲೂ ಬಿಜೆಪಿ ಕನಿಷ್ಠ. ಆರ್.ಎಸ್.ಎಸ್., ಬಿಜೆಪಿಯವರು ಧರ್ಮ, ಜಾತಿಗಳ ನಡುವೆ ದ್ವೇಷ ಬಿತ್ತುತ್ತಾರೆ. ಬಿಜೆಪಿ ನಾಯಕರಲ್ಲಿ ಯಾರ ಮಕ್ಕಳು ಗೋಶಾಲೆಗೆ ಹೋಗಿದ್ದಾರೆ? ಧರ್ಮರಕ್ಷಣೆಗೆ ಶಾಲು ಹಾಕಿಕೊಂಡು ತ್ರಿಶೂಲ ಕತ್ತಿ ಹಿಡಿದು ಬೀದಿಗೆ ಇಳಿಯುತ್ತಾರೆ. ಕರಾವಳಿ ರಕ್ತ ಕಣ್ಣೀರು ಪುಸ್ತಕ ನೋಡಿದರೆ ಧರ್ಮ ರಕ್ಷಣೆಯಲ್ಲಿ ಯಾವ ಯಾವ ಸಮಾಜದ ಜನ ಇದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಾಮಾಜಿಕ ಹೋರಾಟಗಾರ ಮನೀರ್ ಕಾಟಿಪಳ್ಳ, ನಟ ಕಿಶೋರ್, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಇದ್ದರು.

