ರಾಜಸ್ಥಾನದ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿರುವ ರೆಸ್ಟೊರೆಂಟ್‌ನಲ್ಲಿ ನಡೆದ ಜಗಳದಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಸೇರಿದಂತೆ ಐವರು ಅಮಾನತುಗೊಂಡಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಈ ಹೊಡೆದಾಟ ರೆಸ್ಟೋರೆಂಟ್‌ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಗಳಲ್ಲಿ ಜನರು ಪರಸ್ಪರ ಹೊಡೆಯುವುದನ್ನು ಮತ್ತು ಕಲ್ಲುಗಳನ್ನು ಎಸೆಯುವುದನ್ನು ತೋರಿಸುತ್ತವೆ.
ಐಎಎಸ್ ಅಧಿಕಾರಿ ಗಿರಿಧರ್ ಮತ್ತು ಐಪಿಎಸ್ ಅಧಿಕಾರಿ ಸುಶೀಲ್ ಕುಮಾರ್ ಬಿಷ್ಣೋಯ್ ಅವರನ್ನು ಅಮಾನತುಗೊಳಿಸಲಾಗಿದೆ. ಗಿರಿಧರ್ ಅಜ್ಮೀರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರೆ, ಸುಶೀಲ್ ಕುಮಾರ್ ಬಿಷ್ಣೋಯ್ ಅವರನ್ನು ಗಂಗಾಪುರ ನಗರ ಪೊಲೀಸ್ ಠಾಣೆಯ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಿಸಲಾಗಿತ್ತು.
ರಾಜಸ್ಥಾನ ಪೊಲೀಸರು ವಿವರವಾದ ವಿಚಾರಣೆ ನಡೆಸುತ್ತಿದ್ದಂತೆ ಇವರೊಟ್ಟಿಗೆ ಓರ್ವ ಕಾನ್‌ಸ್ಟೆಬಲ್ ಮತ್ತು ಇತರ ಇಬ್ಬರು ಸರ್ಕಾರಿ ನೌಕರರು ಅಮಾನತುಗೊಂಡಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಅಧಿಕಾರಿಗಳು, ಐಪಿಎಸ್ ಅಧಿಕಾರಿಯ ಹೊಸ ಪೋಸ್ಟಿಂಗ್ ಅನ್ನು ಆಚರಿಸಲು ಆಯೋಜಿಸಲಾಗಿದ್ದ ಬೀಳ್ಕೊಡುಗೆ ಪಾರ್ಟಿಯಿಂದ ಹಿಂತಿರುಗುತ್ತಿದ್ದರು. ಅವರು ಶೌಚಾಲಯಕ್ಕೆ ಹೋಗಬೇಕಾಗಿದ್ದರಿಂದ ರೆಸ್ಟೋರೆಂಟ್‌ನ ಹೊರಗೆ ಗಾಡಿ ನಿಲ್ಲಿಸಿದರು. ಶೌಚಾಲಯ ತೆರೆಯುವಂತೆ ರೆಸ್ಟೋರೆಂಟ್ ನ ಸಿಬ್ಬಂದಿಯನ್ನ ಅಧಿಕಾರಿಗಳು ಕೇಳಿದಾಗ ವಾಗ್ವಾದ ನಡೆದಿದೆ. ಜೊತೆಗೆ ಬನಿಯನ್ ನಲ್ಲಿ ತಿರುಗಾಡುತ್ತಿದ್ದಕ್ಕಾಗಿ ರೆಸ್ಟೋರೆಂಟ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ನಂತರ ಜಗಳ ಪ್ರಾರಂಭವಾಯಿತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರೆಸ್ಟೊರೆಂಟ್ ನೌಕರರು ವಾಗ್ದಾಳಿ ನಡೆಸಿದಾಗ ಐಪಿಎಸ್ ಅಧಿಕಾರಿ ಸ್ಥಳದಿಂದ ನಿರ್ಗಮಿಸಿದರು ಎಂದು ವರದಿಯಾಗಿದೆ. ಕೆಲ ಪೊಲೀಸರೊಂದಿಗೆ ಅಧಿಕಾರಿ ಹಿಂತಿರುಗಿ ತಮ್ಮ ಸಿಬ್ಬಂದಿಗೆ ಥಳಿಸಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ದೂರಿನಲ್ಲಿ ಆರೋಪಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ವಿಜಿಲೆನ್ಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ರಾಜಸ್ಥಾನ ಪೊಲೀಸ್ ಮುಖ್ಯಸ್ಥ ಉಮೇಶ್ ಮಿಶ್ರಾ ಹೇಳಿದ್ದಾರೆ. ಐಪಿಎಸ್ ಅಧಿಕಾರಿ ಬಿಷ್ಣೋಯ್ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
CCTV Captures Night Brawl At Rajasthan Eatery, IAS, Senior Cop Suspended
Read here: https://t.co/pqzSfKK75U pic.twitter.com/aAlMleWWWI
— NDTV Videos (@ndtvvideos) June 14, 2023