ಬೆಂಗಳೂರು: ಪತ್ನಿಗೆ ವಂಚಿಸಿ ಅಕ್ರಮ ಸಂಬಂಧ ಬೆಳೆಸಿ ಪ್ರೇಯಸಿ ಜೊತೆ ಚಕ್ಕಂದವಾಡುತ್ತಾಗಲೇ ಪಿಜಿಗೆ ನುಗ್ಗಿದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಜೆಡ್ರೆಲಾ ಜಬ್ ಆರೂಪ್ ಬಂಧಿತ ಆರೋಪಿ. ಬೆಂಗಳುರಿನ ಡಿಸಿ ಆರ್ ಇ ಪಶ್ಚಿಮ ವಿಭಾಗದ ಪೊಲೀಸರು ಆರೋಪಿ ಟೆಕ್ಕಿಯನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಜೆಡ್ರೆಲಾ ಜಬ್ ಆರೂಪ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಪತ್ನಿ ಕೆಲಸ ಮಾಡುತ್ತಿದ್ದರು. ಪತಿ ಮಹಾಶಯ ಟೆಕ್ಕಿಯಾಗಿದ್ದ. ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಕಿರುಕುಳ ನೀಡಲಾರಂಭಿಸಿದ್ದಾನೆ. ಜಾತಿ ನಿಂದನೆ ಮಾಡಿ ಹಿಂಸಿಸ ತೊಡಗಿದ್ದಾನೆ. ಅಲ್ಲದೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿ ಹಲ್ಲೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಕಿರುಕುಳ ತಾಳಲಾರದೇ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಟ್ರಾಸಿಟಿ ಕೇಸ್ ಕೂಡ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಪತಿ ಮಹಾಶಯ ಪ್ರೇಯಸಿಯೊಂದಿಗೆ ಪಿಜಿಯಲ್ಲಿ ಇರುವುದು ಗೊತ್ತಾಗಿದೆ.
ಪತ್ನಿಗೆ ವಂಚಿಸಿ, ಹಿಂಸಿಸುತ್ತಿದ್ದ ಪತಿ ಮಹಾಶಯ ಪ್ರೇಯಸಿಯೊಂದಿಗೆ ಪಿಜಿ ರೂಮಿನಲ್ಲಿ ಸರಸ ಸಲ್ಲಾಪದಲ್ಲಿದ್ದ. ನೇರವಾಗಿ ಪಿಜಿ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿ ಜೆಡ್ರೆಲಾ ಜಬ್ ಆರೂಪ್ ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

