ಬೆಂಗಳೂರು: ಬೆಂಗಳೂರಿನ ಬನಶಂಕರಿ ಎರಡನೇ ಹಂತದ ಗೋಕುಲ್ ವೆಜ್ ಪಾರ್ಟಿ ಹಾಲ್ ನಲ್ಲಿ ವ್ಯಕ್ತಿಯೊಬ್ಬ ನಾಮಕರಣ ಸಮಾರಂಭಕ್ಕೆ ತಡವಾಗಿ ಬಂದ ಪತ್ನಿ ಮತ್ತು ತನ್ನದೇ 11 ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ.
ಜುಲೈ 17ರಂದು ಘಟನೆ ನಡೆದಿದೆ. ಅಂದು ಬೆಳಗ್ಗೆ 10.30 ಕ್ಕೆ ನಾಮಕರಣ ಕಾರ್ಯಕ್ರಮ ನಿಗದಿಯಾಗಿದ್ದು, ಹೆಸರುಘಟ್ಟದಲ್ಲಿರುವ ತವರು ಮನೆಯಿಂದ ಪತ್ನಿ ರಮ್ಯಾ ಹಾಗೂ ಆಕೆಯ ಕುಟುಂಬದವರು ಒಂದು ಗಂಟೆ ತಡವಾಗಿ ಬಂದಿದ್ದರು. ಇದಕ್ಕೆ ಪತಿ ವಿನಾಯಕ ಆಕ್ರೋಶಗೊಂಡಿದ್ದು, ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳ ಎದುರಲ್ಲೇ ಗಲಾಟೆ ಮಾಡಿದ್ದಾನೆ. ಮಾವನ ಮೇಲೆ ಹಲ್ಲೆ ನಡೆಸಿದ್ದಾನೆ. ಪತ್ನಿಯ ಕೂದಲು ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾನೆ. ಮಾವ ಎತ್ತಿಕೊಂಡಿದ್ದ ತನ್ನ 11 ತಿಂಗಳ ಮಗುವನ್ನು ಕಸಿದುಕೊಂಡು ನೆಲಕ್ಕೆ ಎಸೆದಿದ್ದಾನೆ. ಮಗು ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಚಿಕಿತ್ಸೆ ಪಡೆಯುತ್ತಿದೆ.
ಜಗಳ ತಡೆಯಲು ಬಂದ ಹೋಟೆಲ್ ಸಿಬ್ಬಂದಿ ಮೇಲೆಯೂ ವಿನಾಯಕ ಹಲ್ಲೆ ಮಾಡಿ ಕಚ್ಚಿ ಗಾಯಗೊಳಿಸಿದ್ದಾನೆ. ಪತ್ನಿ ರಮ್ಯಾ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿನಾಯಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

