ನವದೆಹಲಿ: ಬಡವರ ಮಕ್ಕಳನ್ನು ಕದ್ದು ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದ ಶಿಶು ಕಳ್ಳಸಾಗಾಣಿಕೆ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಶ್ಮಿನ್ (30), ಅಂಜಲಿ (36) ಹಾಗೂ ಜಿತೇಂದರ್ (47) ಬಂಧಿತ ಆರೋಪಿಗಳು. ದೆಹಲಿಯ ಉತ್ತಮ್ ನಗರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಗುಜರಾತ್ ಹಾಗೂ ರಾಜಸ್ಥಾನದ ಬಡ ಕುಟುಂಬದವರನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಮಕ್ಕಳನ್ನು ಕದ್ದು ದೆಹಲಿಯಲ್ಲಿರುವ ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದರು. ಪ್ರತಿ ಮಗುವಿಗೆ 5 ರಿಂದ 10 ಲಕ್ಷದವರೆಗೆ ಹಣ ಪಡೆಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಉತ್ತಮ್ ನಗರದ ಮೇಲೆ ದಾಳಿ ನಡೆಸಿದ್ದ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.