HomeKarnatakaಸುವರ್ಣಸೌಧದಲ್ಲಿ ಅನಾವರಣಗೊಳ್ಳಲಿದೆ ಬಸವಣ್ಣ ಸ್ಥಾಪಿಸಿದ ವಿಶ್ವದ ಮೊದಲ ಸಂಸತ್ ‘ಅನುಭವ ಮಂಟಪ’ದ ವೈಭವ

ಸುವರ್ಣಸೌಧದಲ್ಲಿ ಅನಾವರಣಗೊಳ್ಳಲಿದೆ ಬಸವಣ್ಣ ಸ್ಥಾಪಿಸಿದ ವಿಶ್ವದ ಮೊದಲ ಸಂಸತ್ ‘ಅನುಭವ ಮಂಟಪ’ದ ವೈಭವ

 ಬೆಳಗಾವಿ: ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು ಐತಿಹಾಸಿಕ ಕ್ಷಣವು ಬೆಳಗಾವಿಯ ಸುವರ್ಣ ಸೌಧದಲ್ಲಿ ದಾಖಲಾಗಲಿದೆ.

ವಿಶ್ವಗುರು ಶ್ರೀ ಬಸವಣ್ಣನವರು ಸ್ಥಾಪಿಸಿದ, “ವಿಶ್ವದ ಮೊದಲ ಸಂಸತ್ತು” ಎಂಬ ಖ್ಯಾತಿಯ “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣವು ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಚಳಿಗಾಲ ಅಧಿವೇಶನದ ಮೊದಲ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನಾವರಣಗೊಳ್ಳಲಿದೆ.

ಇದು ಕೇವಲ ಒಂದು ತೈಲವರ್ಣ ಚಿತ್ರ ಅನಾವರಣ ಕಾರ್ಯಕ್ರಮವಲ್ಲ, ಬದಲಾಗಿ ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಗಳು, ಸಮಾನತೆ, ಮಾನವೀಯ ಸಂದೇಶಗಳನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸುವ ಹಾಗೂ ಮಹಾತ್ಮ ಗಾಂಧೀಜಿಯವರು ಅಧಿವೇಶನದಲ್ಲಿ ಪಾಲ್ಗೊಂಡ ಶತಮಾನೋತ್ಸವದ, ಸ್ಮರಣಾರ್ಥವಾಗಿ ನಡೆಯುವ ಒಂದು ಮಹತ್ವದ ಐತಿಹಾಸಿಕ ಕ್ಷಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರಕ್ಕೆ ಜೀವಂತಿಗೆ ಮತ್ತು ನೈಜತೆ ತುಂಬಿದವರು ಬಿ.ಎಲ್. ಶಂಕರ್ ನೇತೃತ್ವದಲ್ಲಿ ಪ್ರಖ್ಯಾತ ಕಲಾವಿದರಾದ   ಬೆಂಗಳೂರು ಚಿತ್ರಕಲಾ ಪರಿಷತ್ ನ ಸತೀಶ್ ರಾವ್  ಶಿವಮೊಗ್ಗ,  ಶ್ರೀಕಾಂತ್ ಹೆಗಡೆ ಸಿದ್ದಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾ ಶಾಲೆಯ  ಅಶೋಕ್ ಯು.,  ಜಗಳೂರು ರಾಜಾ ರವಿವರ್ಮ ಕಲಾ ಶಾಲೆಯ ರೂಪಾ ಎಂ.ಆರ್.,  ವೀರಣ್ಣ ಮಡಿವಾಳಪ್ಪ ಬಬ್ಲಿ, ಬೈಲಹೊಂಗಲ ಮತ್ತು ಮಹೇಶ ನಿಂಗಪ್ಪ, ದಫಲಾಪುರ, ಜಮಖಂಡಿ ಅವರು.

ಮೊದಲ ಸಭಾಧ್ಯಕ್ಷ ಅಲ್ಲಮಪ್ರಭು ಅವರ ಮುಂದಾಳುತ್ವದಲ್ಲಿ ಅಜರಾಮರ ಚಿಂತನೆಗಳನ್ನು ಮತ್ತು ಅನನ್ಯ ತತ್ತ್ವಜ್ಞಾನವನ್ನು ಪ್ರತಿಬಿಂಬಿಸಿದ ಈ ಪವಿತ್ರ ವೇದಿಕೆಯು ಕೇವಲ ಶರಣ ಚಿಂತನೆಗಳ ಕೇಂದ್ರವಾಗಿರದೆ ಸಮಸ್ತ ಮನುಕುಲದ ಏಳಿಗೆಗೆ ಶಾಶ್ವತ ಆದರ್ಶಗಳನ್ನು ನೀಡಿ, ಮಾನವೀಯತೆ ಮತ್ತು ಸಮಾನತೆಯ ಮಹಾನ್ ಸಂದೇಶವನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಟ್ಟ ಶಕ್ತಿ ಕೇಂದ್ರವಾಗಿತ್ತು.

ಇದು ಸರ್ವಜಾತಿ, ಧರ್ಮಗಳ ಶರಣರನ್ನು ಸ್ವೀಕರಿಸಿದ ಪವಿತ್ರ ತಾಣವಾಗಿದ್ದು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ದೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, ಕೇತಲದೇವಿ, ದುಗ್ಗಳೆ, ಕಾಳವ್ವ ಮೊದಲಾದ ಶರಣರ ದಿವ್ಯ ಚಿಂತನೆಯನ್ನು ಮತ್ತು  ಅನುಭವಗಳನ್ನು ಜಗತ್ತಿಗೆ ಪರಿಚಯಿಸಿದ ಪುಣ್ಯ ಸ್ಥಳವಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್ 9 ಸೋಮವಾರ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿರುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಉಪಸ್ಥಿತರಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular