ಬೆಂಗಳೂರು: ಬೃಹತ್ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ ಘಟನೆ ಬೆಂಗಳೂರು ವಾಯುವ್ಯ ವಿಭಾಗ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೋನ್ ಮಿಲ್ ನಲ್ಲಿರುವ ಸ್ಮಾರ್ಟ್ ಪಾಯಿಂಟ್ ನಲ್ಲಿ ನಡೆದಿದೆ.
ಸ್ವಾಮಿ(53) ಮೃತಪಟ್ಟ ಸೆಕ್ಯೂರಿಟಿ ಗಾರ್ಡ್ ಎಂದು ಗುರುತಿಸಲಾಗಿದೆ. ಸ್ಮಾರ್ಟ್ ಪಾಯಿಂಟ್ ಗೆ ಬರುವ ಗೂಡ್ಸ್ ವಾಹನಗಳಿಗೆ ಗೇಟ್ ತೆಗೆಯುವ ಮತ್ತು ಹಾಕುವ ಕೆಲಸವನ್ನು ಸ್ವಾಮಿ ಮಾಡುತ್ತಿದ್ದರು. ಬುಧವಾರ ತಡರಾತ್ರಿ ಗೇಟ್ ತೆಗೆಯುವ ವೇಳೆ ಬೃಹತ್ ಗೇಟ್ ಮೈಮೇಲೆ ಬಿದ್ದು ದುರಂತ ಸಂಭವಿಸಿದೆ. ಬೆಳಗ್ಗೆ ಸಿಬ್ಬಂದಿ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆ ಗಾರೆ ಕೆಲಸ ಮಾಡುತ್ತಿದ್ದ ಸ್ವಾಮಿ ರಾತ್ರಿ ವೇಳೆ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದರು.

