ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಬೊಲೆರೋ ವಾಹನದ ಮೇಲೆ ಬೃಹತ್ ಕಂಟೈನರ್ ಪಲ್ಟಿಯಾದ ಪರಿಣಾಮ, ವಾಹನದ ಒಳಗಿದ್ದವರು ಸಿಲುಕಿಕೊಂಡಿದ್ದಾರೆ.
ದೊಡ್ಡಪೈಲಗುರ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಘಟನೆ ನಡೆದಿದೆ.ಅತಿ ವೇಗವಾಗಿ ಬಂದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಚಲಿಸುತ್ತಿದ್ದ ಬೊಲೆರೋ ವಾಹನದ ಮೇಲೆ ಉರುಳಿ ಬಿದ್ದಿದೆ.ಕಂಟೈನರ್ ಭಾರಕ್ಕೆ ಬೊಲೆರೋ ವಾಹನವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅದರಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ, ವಾಹನದಲ್ಲಿದ್ದ ಹಲವರು ಒಳಗೆ ಸಿಲುಕಿರುವ ಆತಂಕ ವ್ಯಕ್ತವಾಗಿದೆ.ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಧಾವಿಸಿದ್ದು, ಎರಡು ಬೃಹತ್ ಕ್ರೇನ್ ಗಳ ಸಹಾಯದಿಂದ ಕಂಟೈನರ್ ಅನ್ನು ಎತ್ತುವ ಪ್ರಯತ್ನ ನಡೆಸುತ್ತಿದ್ದಾರೆ.ಈ ಘಟನೆಯಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.ಕಂಟೇನರ್ ಮೇಲಕ್ಕೆತ್ತಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

