ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಜಿಮ್ ಟ್ರೇನರ್ ಹಿಂದೂ ಯುವತಿಯನ್ನು ಮತಾಂತರ ಮಾಡಿದ್ದಾನೆ ಎಂಬ ಪ್ರಕರಣ ದಿನಕ್ಕೊಂದು ತಿರುವು ಪದೆಯುತ್ತಿದೆ. ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸಮೀರ್ ಮುಲ್ಲಾ ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾನೆ.
ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋದ ಬಗ್ಗೆ ಮಾತನಾಡಿದ ಆರೋಪಿ ಸಮೀರ್, ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ತಾನು ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ಈ ವಿಡಿಯೋವನ್ನು ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ತನ್ನ ಮತ್ತು ಸಂತ್ರಸ್ತ ಹುಡುಗಿಯ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವಂತೆ ಸಮೀರ್ ಆಗ್ರಹಿಸಿದ್ದಾನೆ. ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದರೆ, ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ, ನಿಜವಾಗಿ ಪ್ರಜ್ಞೆ ಕಳೆದುಕೊಂಡಿದ್ದು ನಾನೇ, ಹುಡುಗಿಯಲ್ಲ ಎಂದು ಸಮೀರ್ ಹೇಳಿಕೆ ನೀಡಿದ್ದಾನೆ. ವಿಡಿಯೋವನ್ನು ಆ ಹುಡುಗಿಯೇ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವುದಾಗಿ ಸಮೀರ್ ಆರೋಪಿಸಿದ್ದಾನೆ.
ಸದ್ಯ ಹಲ್ಲೆಗೊಳಗಾಗಿರುವ ಸಮೀರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೊಂದೆಡೆ ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

