ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿ ಕೊಲೆಗೈದಿದ್ದ ಕಾಮುಕನನ್ನು ಲೇಡಿ ಪಿಎಸ್ಐ ಅನ್ನಪೂರ್ಣ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಕಾಮುಕ ಕ್ರಿಮಿಯ ಎದೆ ಸೀಳಿರುವ ಪಿಎಸ್ ಐ ಅನ್ನಪೂರ್ಣ ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಪಿಎಸ್ಐ ಅನ್ನಪೂರ್ಣ ಅವರ ಧೈರ್ಯ, ಸಾಹಸಕ್ಕೆ ಸಚಿವ ಸಂತೋಷ್ ಲಾಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಪಿಯಿಂದ ಹಲ್ಲೆಗೊಳಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ ಐ ಅನ್ನಪೂರ್ಣ ಅವರನ್ನು ಭೇಟಿಯಾಗುತ್ತಿದ್ದಂತೆ ಸಚಿವ ಸಂತೋಷ್ ಲಾಡ್ ಸೆಲ್ಯೂಟ್ ಹೊಡೆದು, ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿಎಸ್ ಐ ಅನ್ನಪೂರ್ಣ ಅವರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ನಿನ್ನೆ ಹುಬ್ಬಳ್ಳಿಯ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಕೊಲೆಗೈದು ಆರೋಪಿ ಪರರೈಯಾಗಿದ್ದ. ಸಿಸಿಟಿವಿ ಕ್ಯಾಮರಾ ಆಧರಿಸಿ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಿಹಾರ ಮೂಲದ ರಿತೇಶ್ ಆರೋಪಿ. ಸ್ಥಳ ಮಹಜರು ನಡೆಸಲು ಆರೋಪಿಯನ್ನು ಕರೆದೊಯ್ದ ವೇಳೆ ರಾಯನಾಳ ಸೇತುವೆ ಬಳಿ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ ಐ ಅನ್ನಪೂರ್ಣ ಗಾಯಗೊಂಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಅನ್ನಪೂರ್ಣ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಯ ಬೆನ್ನಿಗೆ ಗುಂಡೇಟು ತಗುಲಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕ ಪಿಎಸ್ ಐ ಅನ್ನಪೂರ್ಣ ಗುಂಡೇಟಿಗೆ ಬಲಿಯಾಗಿದ್ದಾನೆ. ಪಿಎಸ್ ಐ ಕಾರ್ಯಕ್ಕೆ ರಾಜ್ಯ, ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.