ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಕಾಮುಕ ಪೊಲೀಸ್ ಎನ್ ಕೌಂಟ್ ರಲ್ಲಿ ಬಲಿಯಾಗಿದ್ದಾನೆ.
ಬಿಹಾರ ಮೂಲದ ರಿತೇಶ್ ಮೃತ ಆರೋಪಿ. ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದ. ಅಶೋಕನಗರದ ಪಾಳು ಮನೆಯ ಶೆಡ್ ನಲ್ಲಿ ಬಾಲಕಿ ಶವವಿಟ್ಟು ಪರಾರಿಯಾಗಿದ್ದ. ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದರು.
ಸ್ಥಳ ಮಹಜರು ನಡೆಸಲು ಆರೋಪಿಯನ್ನು ಕರೆದೊಯ್ದ ವೇಳೆ ರಾಯನಾಳ ಸೇತುವೆ ಬಳಿ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಲ್ಲೆ ವೇಳೆ ಲೇಡಿ ಪಿಎಸ್ ಐ ಅನ್ನಪೂರ್ಣ ಅವರಿಗೂ ಗಾಯಗಳಾಗಿವೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಲೇಡಿ ಪಿಎಸ್ ಐ ಅನ್ನಪೂರ್ಣ ಆರೋಪಿಗೆ ಗುಂಡೇಟು ಹೊಡೆದಿದ್ದು, ಗುಂಡೇಟು ಆತನ ಬೆನ್ನಿಗೆ ತಗುಲಿದೆ. ಸ್ಥಳದಲ್ಲೇ ಆರೋಪಿ ಸಾವನ್ನಪ್ಪಿದ್ದಾನೆ.
ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ ಕಾಮುಕನನ್ನು ಲೇಡಿ ಪಿಎಸ್ ಐ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದು, ಮೆಚ್ಚುಗೆಗೆ ಕಾರಣವಾಗಿದೆ. ಲೇಡಿ ಪಿಎಸ್ ಐ ಅನ್ನಪೂರ್ಣ ಅವರಿಗೆ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ಅತ್ಯಾಚಾರ ಆರೋಪಿ ಎನ್ ಕೌಂಟರ್ ಗೆ ಬಲಿಯಾಗಿದ್ದು ಅಪರಾಧಿಗಳಿಗೆ ತಕ್ಕ ಪಾಠವಾಗಿದೆ.
ಸದ್ಯ ಪಿಎಸ್ ಐ ಅನ್ನಪೂರ್ಣ ಹುಬ್ಬಳ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಮೂಲದ ರೈತ ಕುಟುಂಬದ ಅನ್ನಪೂರ್ಣ ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ನೆರಳಲ್ಲಿ ವಿದ್ಯಾಭ್ಯಾಸ ಮಾಡಿ, ಎಂಎಸ್ ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರು. ತನ್ನಿಷ್ಟದಂತೆ ಪೊಲೀಸ್ ಇಲಾಖೆಗೆ ಸೇರಿ ಪಿಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.