ಹುಬ್ಬಳ್ಳಿ: ಚಿಗರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಣಕಲ್ ಬಳಿಯ ಚಿಗರಿ ಪಥದಲ್ಲಿ ಈ ದುರಂತ ಸಂಭವಿಸಿದೆ. ಚಿಗರಿ ಬಸ್ ಹಾಗೂ ನೆಕ್ಸಾನ್ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಿರೀಶ್ ಬಣವಿ (62) ಮೃತ ದುರ್ದೈವಿ. ಗಿರೀಶ್ ಧಾರವಾಡ ನಗರದ ಸರಸ್ವತಿ ನಗರ ನಿವಾಸಿ. ಹುಬ್ಬಳ್ಳಿ ಕಡೆಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ಚಿಗರಿ ಬಸ್ ಹಾಗೂ ಧಾರವಾಡ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.
ಹುಬ್ಬಳ್ಲಿಯ ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

