ಹುಬ್ಬಳ್ಳಿ: ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಾಕೋಲೆಟ್ ಆಸೆ ತೋರಿಸಿ ಕರೆದು ಹೊತ್ತೊಯ್ದ ಕಾಮುಕ, ಬಾಲಕಿಮೇಲೆ ಆತ್ಯಾಚಾರವೆಸಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ತಾಯಿ ಮನೆಯ ಒಳಗೆ ಕೆಲಸ ಮಾಡುತ್ತಿದ್ದರು. ಬಾಲಕಿ ಮನೆ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಮನೆಯ ಬಳಿ ಬಂದ ಆರೋಪಿ ಮನೆ ಗೇಟಿನ ಬಳಿ ನಿಂತು ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ ಕರೆದಿದ್ದಾನೆ. ಬಳಿಕ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.
ಬಿಹಾರ ಮೂಲದ ಯುವಕ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಕಾಮುಕ ಮನೆ ಬಳಿ ಬರುತ್ತಿರುವ ಹಾಗೂ ಬಾಲಕಿಯನ್ನು ಹೊತ್ತೊಯ್ದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬೆನ್ನಲ್ಲೇ ಹುಬ್ಬಳ್ಳಿ ನಗರ ಬೆಚ್ಚಿಬಿದ್ದಿದ್ದು, ಸಾರ್ವಜನಿಕರು ಅಶೋಕನಗರ ಪೊಲೀಸ್ ಠಾಣೆ ಬಳಿ ಧಾವಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾಮುಕನನ್ನು ಬಂಧಿಸಿ ತಮಗೊಪ್ಪಿಸಿ. ಇಲ್ಲವೇ ಆರೋಪಿಗೆ ಕಥಿಣ ಶಿಕ್ಷೆ ವಿಧಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಅಶೋಕನಗರ ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹುಬ್ಬಳ್ಳಿ-ಧಾರವಾಡ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ. ಶೀಘ್ರದಲ್ಲಿ ಆರೋಪಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.