ಉದ್ಯೋಗ ಸಂದರ್ಶನ ಎಂದರೆ ಕೇವಲ ಅಭ್ಯರ್ಥಿಯ ವಿದ್ಯಾರ್ಹತೆ, ಅಂಕಗಳು ಮತ್ತು ಜ್ಞಾನವನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲ. ಅಭ್ಯರ್ಥಿಯ ಆಲೋಚನಾ ವಿಧಾನ, ಸಮಸ್ಯೆಗಳನ್ನು ಎದುರಿಸುವ ರೀತಿ, ಸಮಯಪ್ರಜ್ಞೆ ಹಾಗೂ ಮಾನಸಿಕ ಪ್ರಬುದ್ಧತೆಯನ್ನೂ ಪರೀಕ್ಷಿಸಲಾಗುತ್ತದೆ.
ವಿಶೇಷವಾಗಿ HR ರೌಂಡ್‌ನಲ್ಲಿ ಅಭ್ಯರ್ಥಿಯು ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಕೆಲವೊಮ್ಮೆ ನಿರೀಕ್ಷೆಯೇ ಮಾಡದಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಂತಹದ್ದೇ ಒಂದು ಸಂದರ್ಶನದಲ್ಲಿ ಯುವತಿಯೊಬ್ಬರಿಗೆ ಕೇಳಲಾದ ಪ್ರಶ್ನೆ ಹಾಗೂ ಆಕೆ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೈನಲ್ HR ರೌಂಡ್‌ಗೆ ಮೂವರು ಯುವಕರು, ಓರ್ವ ಯುವತಿ
ಒಂದು ಕಂಪನಿಯಲ್ಲಿ ನಡೆದ ಉದ್ಯೋಗ ಸಂದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ ಸುಮಾರು ಶೇ.70ರಷ್ಟು ಪುರುಷರು ಹಾಗೂ ಶೇ.30ರಷ್ಟು ಮಹಿಳೆಯರು ಇದ್ದರು.
ವಿವಿಧ ಹಂತಗಳ ಸಂದರ್ಶನದ ಬಳಿಕ ಅಂತಿಮವಾಗಿ ಮೂವರು ಯುವಕರು ಹಾಗೂ ಓರ್ವ ಯುವತಿ ಫೈನಲ್ HR ರೌಂಡ್‌ಗೆ ಆಯ್ಕೆಯಾಗಿದ್ದರು. ಈ ವೇಳೆ ಕಂಪನಿಯ ತಂಡದ ನಾಯಕರು ಹಾಗೂ ನಿರ್ದೇಶಕರು ಅಭ್ಯರ್ಥಿಗಳೊಂದಿಗೆ ಮಾತನಾಡಿ, ಇದುವರೆಗೆ ಅವರ ಪ್ರತಿಭೆ, ಸಮಯಪ್ರಜ್ಞೆ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸಿರುವುದಾಗಿ ತಿಳಿಸಿದರು.
ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ಮಾನಸಿಕ ಸ್ಥಿತಿ, ಆಲೋಚನಾ ವಿಧಾನ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು ಎಂದು ಹೇಳಿದರು.
ಯುವತಿಗೆ ಎದುರಾದ ವಿಚಿತ್ರ ಪ್ರಶ್ನೆ
ಸಂದರ್ಶನದ ವೇಳೆ ಅಭ್ಯರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸುವಂತಹ ಕೆಲವು ಅನಿರೀಕ್ಷಿತ ಪ್ರಶ್ನೆಗಳನ್ನು ಕೇಳಲಾಯಿತು. ಮೊದಲಿಗೆ ಸ್ವಲ್ಪ ಗಾಬರಿಯಾದರೂ, ಆ ಯುವತಿ ನಂತರ ಸಮಾಧಾನಗೊಂಡು ಯಾವುದೇ ಪ್ರಶ್ನೆಯಾದರೂ ಶಾಂತವಾಗಿ ಯೋಚಿಸಿ ಉತ್ತರಿಸಬೇಕು ಎಂದು ನಿರ್ಧರಿಸಿದಳು.
ಅಷ್ಟರಲ್ಲಿ ಸಂದರ್ಶಕರು ಆಕೆಗೆ ಒಂದು ಕಾಲ್ಪನಿಕ ಪ್ರಶ್ನೆ ಕೇಳಿದರು.
“ನೀನು ಮದುವೆಯಾದ ಬಳಿಕ ನಿನ್ನ ಪತಿ ಸಂಸಾರಕ್ಕೆ ಯೋಗ್ಯನಲ್ಲ ಎಂದು ತಿಳಿದುಬಂದರೆ ನೀನು ಹೇಗೆ ಪ್ರತಿಕ್ರಿಯಿಸುತ್ತೀಯಾ?” ಎಂದು ಪ್ರಶ್ನಿಸಿದರು.
ನಿರೀಕ್ಷೆಯೇ ಮಾಡದ ಈ ಪ್ರಶ್ನೆಗೆ ಯುವತಿ ಒಂದು ಕ್ಷಣ ಏನು ಉತ್ತರಿಸಬೇಕು ಎಂದು ಯೋಚಿಸಿದಳು. ಬಳಿಕ ತಕ್ಷಣ ಸಾವರಿಸಿಕೊಂಡು ತನ್ನ ಆಲೋಚನೆಯನ್ನು ಸ್ಪಷ್ಟವಾಗಿ ವಿವರಿಸಿದಳು.
ಯುವತಿ ನೀಡಿದ ಉತ್ತರವೇನು?
“ಇಂತಹ ಪರಿಸ್ಥಿತಿ ಎದುರಾದರೆ ಮೊದಲು ನನ್ನ ಪತಿಯೊಂದಿಗೆ ಮಾತನಾಡಿ, ನಿಜವಾದ ಸಮಸ್ಯೆ ಏನೆಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ. ಮದುವೆಗೆ ಮುನ್ನ ಈ ವಿಷಯ ನನಗೆ ಏಕೆ ತಿಳಿದಿರಲಿಲ್ಲ ಎಂಬುದನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ನಂತರ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ, ಅಗತ್ಯವಿದ್ದರೆ ಸಂಬಂಧಿಸಿದ ತಜ್ಞರ ಬಳಿ ಕರೆದುಕೊಂಡು ಹೋಗಿ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆಯನ್ನು ಕೊಡಿಸಲು ಪ್ರಯತ್ನಿಸುತ್ತೇನೆ.
ಆದರೂ ಸಮಸ್ಯೆ ಬಗೆಹರಿಯದಿದ್ದರೆ, ನನ್ನ ಭಾವನೆಗಳು ಮತ್ತು ನೋವನ್ನು ಪತಿಯೊಂದಿಗೆ ಮುಕ್ತವಾಗಿ ಚರ್ಚಿಸುತ್ತೇನೆ. ಇಬ್ಬರ ನಡುವಿನ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಪರಸ್ಪರ ಒಪ್ಪಿಗೆಯಿಂದ ಬೇರ್ಪಡುವ ಬಗ್ಗೆಯೂ ಯೋಚಿಸುತ್ತೇನೆ.
ಆದರೆ ಈ ವಿಚಾರವನ್ನು ಎಲ್ಲರ ಮುಂದೆ ಹೇಳಿ ನನ್ನ ಪತಿಯ ವ್ಯಕ್ತಿತ್ವಕ್ಕೆ ಅಥವಾ ಗೌರವಕ್ಕೆ ಧಕ್ಕೆ ತರಲು ನಾನು ಬಯಸುವುದಿಲ್ಲ. ಆತನ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀಳದಂತೆ ನೋಡಿಕೊಳ್ಳುತ್ತೇನೆ.
ಒಂದು ವೇಳೆ ಆತನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾದರೆ, ಇಬ್ಬರೂ ಸೇರಿ ಅನಾಥಾಶ್ರಮದಿಂದ ಮಗುವೊಂದನ್ನು ದತ್ತು ಪಡೆದು ನಮ್ಮ ಮಗುವಿನಂತೆ ಬೆಳೆಸಿಕೊಳ್ಳಬಹುದು.
ನನ್ನ ಪತಿ ನನಗೆ ಸ್ನೇಹಿತನಂತೆ, ಮಾರ್ಗದರ್ಶಿಯಂತೆ ಹಾಗೂ ಮೆಂಟರ್‌ನಂತೆ ಇದ್ದರೆ, ಅದಕ್ಕಿಂತ ನನಗೆ ಇನ್ನೇನೂ ಅಗತ್ಯವಿಲ್ಲ” ಎಂದು ಆಕೆ ಉತ್ತರಿಸಿದಳು.
ಯುವತಿಯ ಉತ್ತರಕ್ಕೆ HR ಪ್ಯಾನೆಲ್ ಫಿದಾ!
ಯುವತಿ ನೀಡಿದ ಉತ್ತರಕ್ಕೆ ಸಂದರ್ಶನದ ಪ್ಯಾನೆಲ್ ಮೆಚ್ಚುಗೆ ವ್ಯಕ್ತಪಡಿಸಿತು. ವಿಶೇಷವಾಗಿ ಕಠಿಣ ಪ್ರಶ್ನೆ ಎದುರಾದಾಗ ಗಾಬರಿಯಾಗದೆ, ಸಮಸ್ಯೆಯನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿರುವುದು ಹಾಗೂ ಎದುರಿನ ವ್ಯಕ್ತಿಯ ಭಾವನೆಗಳಿಗೆ ಗೌರವ ನೀಡಿರುವುದು ಪ್ಯಾನೆಲ್‌ನ ಗಮನ ಸೆಳೆಯಿತು.
ಆಕೆಯ ಪ್ರಬುದ್ಧತೆ, ತಾಳ್ಮೆ, ಸಮಯಪ್ರಜ್ಞೆ ಹಾಗೂ ಸಮಸ್ಯೆಯನ್ನು ಪರಿಹರಿಸುವ ಮನೋಭಾವ ಪ್ಯಾನೆಲ್‌ಗೆ ಇಷ್ಟವಾಯಿತು. ಅಂತಿಮವಾಗಿ ಆಕೆಗೆ ಉದ್ಯೋಗವೂ ದೊರೆಯಿತು ಎಂದು ವರದಿಯಾಗಿದೆ.
ಈ ಘಟನೆ ಉದ್ಯೋಗ ಸಂದರ್ಶನದಲ್ಲಿ ಯಾವುದೇ ಪ್ರಶ್ನೆ ಎದುರಾದರೂ ಆತುರದಿಂದ ಉತ್ತರಿಸುವ ಬದಲು, ಕ್ಷಣಕಾಲ ಯೋಚಿಸಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಉತ್ತರಿಸುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ.
ಜೀವನದಲ್ಲಿಯೂ ಇದೇ ಅನ್ವಯಿಸುತ್ತದೆ. ಗಾಬರಿ ಅಥವಾ ಆವೇಶದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಆದರೆ ಶಾಂತವಾಗಿ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾದ ದಾರಿಯನ್ನು ತೋರಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಉದ್ಯೋಗ ಸಂದರ್ಶನಗಳಲ್ಲಷ್ಟೇ ಅಲ್ಲ, ಜೀವನದಲ್ಲಿಯೂ ಸಮಯಪ್ರಜ್ಞೆ, ತಾಳ್ಮೆ ಮತ್ತು ಪ್ರಬುದ್ಧ ಆಲೋಚನಾ ವಿಧಾನ ಬಹಳ ಮುಖ್ಯ.

