ಮನೆಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಗೆ e-KYC ಪ್ರಕ್ರಿಯೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸುವುದಾಗಿ ತೈಲ ಕಂಪನಿಗಳು ಸೂಚಿಸಿವೆ. ಈ ತಿಂಗಳ 16ರೊಳಗೆ ಪ್ರತಿಯೊಬ್ಬ ಗ್ಯಾಸ್ ಗ್ರಾಹಕರು e-KYC ಪೂರ್ಣಗೊಳಿಸಬೇಕಿದೆ. ಆದರೆ ಇದಕ್ಕಾಗಿ ಗ್ಯಾಸ್ ಏಜೆನ್ಸಿ ಅಥವಾ ಡಿಸ್ಟ್ರಿಬ್ಯೂಟರ್ ಕಚೇರಿಗೆ ತೆರಳುವ ಅಗತ್ಯವಿಲ್ಲ. ಮನೆಯಲ್ಲೇ ಮೊಬೈಲ್ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಹೌದು. ಮನೆಯಲ್ಲೇ ಕುಳಿತು ಕೇವಲ ಮೊಬೈಲ್ ಮೂಲಕವೇ LPG ಗ್ಯಾಸ್ e-KYC ಪೂರ್ಣಗೊಳಿಸಬಹುದು. ಗ್ಯಾಸ್ ಏಜೆನ್ಸಿಗೆ ತೆರಳುವ ಅಗತ್ಯವಿಲ್ಲ. ಈ ತಿಂಗಳ 16ರೊಳಗೆ e-KYC ಮಾಡಿಕೊಳ್ಳಬೇಕಿರುವುದರಿಂದ, ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಹಾಗೂ Aadhaar Face RD ಆ್ಯಪ್ ಬಳಸಿ ಸುಲಭವಾಗಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.
ಗ್ಯಾಸ್ ಏಜೆನ್ಸಿಗೆ ಹೋಗದೆ ಮೊಬೈಲ್ ಫೋನ್ ಮೂಲಕವೇ LPG ಗ್ಯಾಸ್ e-KYC ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ಅಧಿಕೃತ ಆ್ಯಪ್ ಮತ್ತು Aadhaar Face RD ಆ್ಯಪ್ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇಂಡೇನ್ ಗ್ಯಾಸ್ ಗ್ರಾಹಕರು IndianOil ONE, HP Gas ಗ್ರಾಹಕರು HP Pay, ಭಾರತ್ ಗ್ಯಾಸ್ ಗ್ರಾಹಕರು HelloBPCL ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಮುಖದ ಮೂಲಕ ಗುರುತಿನ ದೃಢೀಕರಣಕ್ಕಾಗಿ Aadhaar Face RD ಆ್ಯಪ್ ಅಗತ್ಯವಿದೆ.
ಮೊದಲಿಗೆ ನಿಮ್ಮ ಗ್ಯಾಸ್ ಸಂಪರ್ಕಕ್ಕೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಂಬಂಧಿತ ಆ್ಯಪ್‌ನಲ್ಲಿ ಲಾಗಿನ್ ಆಗಬೇಕು. ಮೊಬೈಲ್‌ಗೆ ಬಂದ OTP ನಮೂದಿಸಿ ಖಾತೆಯನ್ನು ದೃಢೀಕರಿಸಿಕೊಳ್ಳಬೇಕು. ನಂತರ ಮೆನುವಿನಲ್ಲಿ LPG e-KYC ಅಥವಾ Aadhaar Authentication ಆಯ್ಕೆಯನ್ನು ಆರಿಸಬೇಕು. ಮುಂದೆ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ, ಅಗತ್ಯ ಅನುಮತಿಗಳನ್ನು ನೀಡಬೇಕು. ನಂತರ Capture Face ಅಥವಾ Scan Face ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಪರದೆಯ ಮೇಲೆ ಕಾಣಿಸುವ ಸೂಚನೆಗಳನ್ನು ಅನುಸರಿಸುತ್ತಾ ಕ್ಯಾಮೆರಾ ಮುಂದೆ ಮುಖವನ್ನು ತೋರಿಸಬೇಕು.
ಫೇಸ್ ಸ್ಕ್ಯಾನ್ ಪೂರ್ಣಗೊಂಡ ಬಳಿಕ e-KYC ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ಸೂಚಿಸುವ ಕನ್‌ಫರ್ಮೇಶನ್ ಮೆಸೇಜ್ ಅಥವಾ ಗ್ರೀನ್ ಟಿಕ್ ಕಾಣಿಸುತ್ತದೆ. ಆದರೆ ಆ್ಯಪ್‌ಗಳ ಹೆಸರು, ಮೆನು ಆಯ್ಕೆಗಳು ಅಥವಾ e-KYC ಪ್ರಕ್ರಿಯೆಯಲ್ಲಿ ಬದಲಾವಣೆಗಳಿರಬಹುದು. ಆದ್ದರಿಂದ ಅಧಿಕೃತ ಆ್ಯಪ್‌ಗಳನ್ನೇ ಬಳಸುವುದು ಅತ್ಯಂತ ಮುಖ್ಯ. ಆಧಾರ್ ವಿವರಗಳನ್ನು ಯಾವುದೇ ಅನಧಿಕೃತ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿ ನಮೂದಿಸಬೇಡಿ.

