ನಗದು (ಕ್ಯಾಶ್) ರೂಪದಲ್ಲಿ ನಡೆಯುವ ಹಣಕಾಸು ವ್ಯವಹಾರಗಳಿಗೆ ಆದಾಯ ತೆರಿಗೆ ಇಲಾಖೆ (Income Tax Department) ಹಲವು ಮಿತಿಗಳನ್ನು ವಿಧಿಸಿದೆ. ಈ ಮಿತಿಗಿಂತ ಹೆಚ್ಚು ನಗದು ಪಾವತಿಸಿದರೆ ಅಥವಾ ಸ್ವೀಕರಿಸಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಭಾರೀ ದಂಡವೂ ವಿಧಿಸಲಾಗುತ್ತದೆ. ಡಿಜಿಟಲ್ ವಹಿವಾಟುಗಳು ಹೆಚ್ಚಾಗಿದ್ದರೂ, ಇನ್ನೂ ಅನೇಕರು ನಗದು ರೂಪದಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಎಷ್ಟು ಬೇಕಾದರೂ ನಗದು ವ್ಯವಹಾರ ಮಾಡಬಹುದು ಎಂಬುದು ತಪ್ಪು ಕಲ್ಪನೆ.
ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದರೂ ದೇಶದಲ್ಲಿ ಇನ್ನೂ ಸಾಕಷ್ಟು ಮಂದಿ ನಗದು ವ್ಯವಹಾರಗಳನ್ನೇ ಅವಲಂಬಿಸಿದ್ದಾರೆ. ಆದರೆ ನಗದು ವಹಿವಾಟುಗಳಿಗೆ ಆದಾಯ ತೆರಿಗೆ ಇಲಾಖೆ ನಿಗದಿತ ಮಿತಿಗಳನ್ನು ವಿಧಿಸಿದ್ದು, ಅವನ್ನು ಮೀರಿ ಹಣ ಸ್ವೀಕರಿಸಿದರೆ ಅಥವಾ ಪಾವತಿಸಿದರೆ ಐಟಿ ನೋಟಿಸ್ ಜೊತೆಗೆ ಭಾರೀ ದಂಡವನ್ನೂ ಎದುರಿಸಬೇಕಾಗಬಹುದು. ಹಾಗಾದರೆ, ಒಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ಎಷ್ಟು ನಗದು ಪಡೆಯಬಹುದು? ಯಾವ ವ್ಯವಹಾರಗಳಿಗೆ ಯಾವ ಮಿತಿ ಅನ್ವಯಿಸುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಕಪ್ಪು ಹಣದ ಹರಿವನ್ನು ತಡೆಯುವ ಉದ್ದೇಶದಿಂದ ನಗದು ವಹಿವಾಟುಗಳ ಮೇಲೆ ಆದಾಯ ತೆರಿಗೆ ಇಲಾಖೆ ಹಲವು ನಿರ್ಬಂಧಗಳನ್ನು ಜಾರಿಗೊಳಿಸಿದೆ. ಒಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ಸ್ವೀಕರಿಸುವಂತಿಲ್ಲ. ವ್ಯಾಪಾರ ಚಟುವಟಿಕೆಗಳಿಗೆ ದಿನಕ್ಕೆ ₹10,000ಕ್ಕಿಂತ ಹೆಚ್ಚು ನಗದು ಪಾವತಿ ಮಾಡಿದರೆ ಅದಕ್ಕೆ ತೆರಿಗೆ ಸಂಬಂಧಿತ ನಿರ್ಬಂಧಗಳು ಅನ್ವಯಿಸುತ್ತವೆ. ಸಾಲ ಪಡೆಯುವುದು, ಆಸ್ತಿ ಖರೀದಿಗೆ ಮುಂಗಡ ಪಾವತಿ ಮಾಡುವಂತಹ ವ್ಯವಹಾರಗಳಿಗೆ ₹20,000 ಮಿತಿ ನಿಗದಿಯಾಗಿದೆ. ಈ ಮಿತಿಯನ್ನು ಮೀರಿ ನಗದು ವ್ಯವಹಾರ ಮಾಡಿದರೆ 100% ದಂಡ ವಿಧಿಸುವ ಅವಕಾಶವಿದೆ.
ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಿದರೆ ಅದನ್ನು ಲೆಕ್ಕಕ್ಕೆ ತೋರಿಸದ ಆದಾಯ (Unaccounted Income) ಎಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಬಹುದು. ಅದೇ ರೀತಿ, ಸಾಲ ಮರುಪಾವತಿಗಾಗಿ ₹20,000ಕ್ಕಿಂತ ಹೆಚ್ಚು ನಗದು ನೀಡುವಂತಿಲ್ಲ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ವರ್ಗಾವಣೆ ಅಥವಾ ಚೆಕ್ ಮೂಲಕವೇ ಪಾವತಿಸಬೇಕು.
ವ್ಯಾಪಾರಿಗಳು ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ₹10,000ಕ್ಕಿಂತ ಹೆಚ್ಚು ನಗದು ಪಾವತಿಸಿದರೆ, ಆ ವೆಚ್ಚದ ಮೇಲೆ ತೆರಿಗೆ ವಿನಾಯಿತಿ (Tax Deduction) ಪಡೆಯಲು ಸಾಧ್ಯವಿಲ್ಲ. ಹಾಗೆಯೇ ₹2,000ಕ್ಕಿಂತ ಹೆಚ್ಚು ನಗದು ರೂಪದಲ್ಲಿ ದೇಣಿಗೆ ನೀಡಿದರೆ, ಅದರ ಮೇಲೆ ತೆರಿಗೆ ವಿನಾಯಿತಿ (Tax Deduction) ಪಡೆಯಲು ಅವಕಾಶ ಇರುವುದಿಲ್ಲ.
ಇನ್ನು ಬ್ಯಾಂಕ್ ಖಾತೆಯಿಂದ ಒಂದೇ ಬಾರಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194N ಅಡಿಯಲ್ಲಿ ಟಿಡಿಎಸ್ (TDS) ಕಡಿತವಾಗುವ ಸಾಧ್ಯತೆಯೂ ಇದೆ. ಭೂಮಿ ಅಥವಾ ಆಸ್ತಿ ಖರೀದಿ–ಮಾರಾಟ ಸಂದರ್ಭದಲ್ಲಿ ₹20,000ವರೆಗೆ ಮಾತ್ರ ನಗದು ಪಾವತಿಗೆ ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಆನ್ಲೈನ್ ವರ್ಗಾವಣೆ ಅಥವಾ ಚೆಕ್ ಮೂಲಕವೇ ಪಾವತಿಸಬೇಕು.
ಒಂದೇ ಬಾರಿ ದೊಡ್ಡ ಪ್ರಮಾಣದ ನಗದು ವ್ಯವಹಾರ ನಡೆಸಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಇದೆ. ಕೆಲವರು ದೊಡ್ಡ ಮೊತ್ತವನ್ನು ಸಣ್ಣ-ಸಣ್ಣ ಕಂತುಗಳಲ್ಲಿ ನಗದು ರೂಪದಲ್ಲಿ ನೀಡಿದರೆ ಸಮಸ್ಯೆಯಾಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ, ಪರಸ್ಪರ ಸಂಬಂಧ ಹೊಂದಿರುವ ಇಂತಹ ವ್ಯವಹಾರಗಳನ್ನು ಇಲಾಖೆ ಒಂದೇ ವಹಿವಾಟು ಎಂದು ಪರಿಗಣಿಸಬಹುದು. ಇದರಿಂದ ಭಾರೀ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.

