HomeIndiaALERT : 'ಝೀಕಾ ವೈರಸ್' ಹೇಗೆ ಹರಡುತ್ತೆ..? ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು ತಿಳಿಯಿರಿ

ALERT : ‘ಝೀಕಾ ವೈರಸ್’ ಹೇಗೆ ಹರಡುತ್ತೆ..? ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು ತಿಳಿಯಿರಿ

ಕೊರೋನಾ ನಡುವೆಯೇ ಇದೀಗ ಝೀಕಾ ವೈರಸ್ ತಲ್ಲಣ ಸೃಷ್ಟಿಸುತ್ತಿದೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ದಿಬ್ಬೂರಹಳ್ಳಿ ವ್ಯಾಪ್ತಿಯ ತಲಕಾಯಲಬೆಟ್ಟ ಹಳ್ಳಿಯಲ್ಲಿ ಈಡಿಸ್ ಈಜಿಪ್ಟಾ ಸೊಳ್ಳೆಗಳ ಸಮೂಹ ಮಾದರಿಗಳನ್ನು ಪರೀಕ್ಷಿಸಿದಾಗ ಝೀಕಾ ವೈರಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲೂ ಕೂಡ ಕಟ್ಟೆಚ್ಚರ ವಹಿಸುವಂತೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಕೆ.ಎಂ.ಸತೀಶ್ ಕುಮಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಡೆಂಗ್ಯೂ/ ಚಿಕುಂಗುನ್ಯಾ, ವೆಸ್ಟನೈಲ್ ಹಾಗೂ ಹಳದಿ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್ ಜಾತಿಯ ಸೊಳ್ಳೆಗಳು ಕಚ್ಚುವುದರಿಂದ ಝೀಕಾ ವೈರಸ್ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಝೀಕಾ ವೈರಸ್ ಕೇವಲ ಸೊಳ್ಳೆಗಳ ಕಡಿತದಿಂದ ಹರಡುವುದಲ್ಲದೇ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಹರಡುತ್ತದೆ. ಮಳೆಗಾಲದಲ್ಲಿ ಈ ವೈರಸ್ ಹರಡಲು ಅನುಕೂಲವಾದ ವಾತಾವರಣ ಸೃಷ್ಟಿಯಾಗುತ್ತದೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳ ಸಾಂದ್ರತೆ ಜಾಸ್ತಿ ಇರುತ್ತದೆ.

ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಜ್ವರ, ಕೆಂಪಾದ ಕಣ್ಣುಗಳು, ಮೈ-ಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪುರಕ್ತ ಮಿಶ್ರಿತ ಗುಳ್ಳೆಗಳು (ಗಂಧೆಗಳು) ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದ್ದು, 2-7 ದಿನಗಳ ಅವಧಿಗೆ ಕಾಣಿಸಿಕೊಳ್ಳುತ್ತವೆ. ರಕ್ತ ಹಾಗೂ ಮೂತ್ರವನ್ನು ಪರೀಕ್ಷಿಸಿದಾಗ ಈ ರೋಗದ ಸೋಂಕು ಇರುವುದು ಕಂಡುಬರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಭವಿಸಬಹುದಾದಂತಹ ಅಪಾಯ

ಗರ್ಭಿಣಿಯರು ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಗರ್ಭಪಾತವಾಗುವ ಸಾಧ್ಯತೆ ಇದೆ ಹಾಗೂ ಹುಟ್ಟಲಿರುವ ಮಗುವಿಗೂ ಕೂಡ ಸೋಂಕು ರವಾನೆಯಾಗಬಹುದಾಗಿದೆ. ಹುಟ್ಟುವ ಮಕ್ಕಳಲ್ಲಿ ಅಂಗಾಗ ನ್ಯೂನತೆ (ಮೈಕ್ರೋಸೆಫಲಿ -ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುವುದು) ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.

ರೋಗ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು

ಸಾಕಷ್ಟು ದ್ರವ ಆಹಾರಗಳನ್ನು ಸೇವಿಸುವುದರ ಮೂಲಕ ನಿರ್ಜಲೀಕರಣವನ್ನು ತಡೆಯಬೇಕು. ಸಾಕಷ್ಟು ವಿಶ್ರಾಂತಿಯನ್ನು ಪಡೆಯಬೇಕು. ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದು.

ಸೊಳ್ಳೆಗಳ ಉತ್ಪತ್ತಿ ತಾಣಗಳು

ಈ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತವೆ. ಡ್ರಮ್, ಬ್ಯಾರೆಲ್, ನೀರಿನ ತೊಟ್ಟಿ, ಏರ್ ಕೂಲರ್, ಪ್ರಿಜ್, ಅನುಪಯುಕ್ತ ಟೈರ್, ಒಡೆದ ಮಡಕೆ, ತೆಂಗಿನ ಚಿಪ್ಪು, ತಾರಸಿ ಮನೆಗಳ ಮೇಲ್ಚಾವಣಿ, ಮನೆಗಳಲ್ಲಿ ಉಪಯೋಗಿಸಿ ಬಿಸಾಡಿದಂತಹ ಘನತ್ಯಾಜ್ಯ ವಸ್ತುಗಳು, ಅಡಿಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳು(ಎಲೆಗಳು), ರಬ್ಬರ್ ತೋಟಗಳಲ್ಲಿ ರಬ್ಬರ್ ಸಂಗ್ರಹಿಸುವ ಕಪ್, ಹೂವಿನ ಕುಂಡ, ಶಾಲಾ-ಕಚೇರಿಗಳ ಮೇಲ್ಚಾವಣಿ ಇತ್ಯಾದಿಗಳಲ್ಲಿ ನೀರು ನಿಂತು ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ.

ಮನೆ ಪರಿಸರ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಮತ್ತು ಆರೋಗ್ಯ ಸಿಬ್ಬಂದಿ/ಆಶಾ ಕಾರ್ಯಕರ್ತೆಯರು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಸೊಳ್ಳೆಗಳು ಪ್ರವೇಶಿಸದಂತೆ ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸುವುದು. ಹೊರಾಂಗಣದಲ್ಲಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಹಾಗೂ ವಿಶ್ರಾಂತಿ ಪಡೆಯುವಾಗ ಮತ್ತು ಮಲಗುವಾಗ ವಿಶೇಷವಾಗಿ ಗರ್ಭಿಣಿಯರು/ ವಯಸ್ಕರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು. ನೀರಿನ ತೊಟ್ಟಿ/ ಟ್ಯಾಂಕ್ನ್ನು ಕನಿಷ್ಟ ಪಕ್ಷ ವಾರಕ್ಕೆ ಎರಡು ಸಲ ಪೂರ್ತಿ ಖಾಲಿ ಮಾಡಿ ಸ್ವಚ್ಛಗೊಳಿಸುವುದು.

ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸಾಧ್ಯವಾದಷ್ಟು ಮೈಮುಚ್ಚುವಂತೆ ಬಟ್ಟೆಯನ್ನು ಧರಿಸುವುದು.

ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. ಸೊಳ್ಳೆ ಕಚ್ಚದಂತೆ ಎಲ್ಲಾ ರೀತಿಯ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಸೂಕ್ತ ಕ್ರಮಗಳನ್ನು ವಹಿಸಬೇಕು.

ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಬಿ.ಎಲ್. ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular