ಚಿತ್ರದುರ್ಗದ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ಭೂಮಿಯನ್ನು ನೀಡಲು ತೋಟಗಾರಿಕೆ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಚಿತ್ರದುರ್ಗ ನಗರ ಸಮೀಪದ ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಸಹ ಒಪ್ಪಿಗೆ ನೀಡಲಾಗಿದೆ.
ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿಯು ಚಿತ್ರದುರ್ಗ ನಗರದಿಂದ ದೂರವಿದ್ದು, ಕಚೇರಿ ಕಾರ್ಯಗಳಿಗೆ ಬರುವ ಜಿಲ್ಲೆಯ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ.
ಈ ಕಾರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಚಿತ್ರದುರ್ಗ ನಗರದಲ್ಲಿಯೇ ನೂತನವಾಗಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಲಾಗುತ್ತದೆ.
ಈ ಸಂಬಂಧ ಕಳೆದ ಒಂದು ವರ್ಷದಿಂದ ಕಂದಾಯ ಇಲಾಖೆ ಸಚಿವರು, ವೈದ್ಯಕೀಯ ಇಲಾಖೆ ಸಚಿವರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿಯೂ ಸಹ ನಿರಂತರವಾಗಿ ಸಭೆ ಮಾಡುತ್ತಾ ಬಂದಿದ್ದರು.
ಗುರುವಾರ ವಿಕಾಸಸೌಧದ ಕೊಠಡಿ ಸಂಖ್ಯೆ 342 ರಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ತೋಟಗಾರಿಕೆ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಈ ವಿಚಾರವಾಗಿ ಸಭೆ ನಡೆಯಿತು.
ಸಭೆಯಲ್ಲಿ ಪ್ರಸ್ತುತ ಇರುವ ತೋಟಗಾರಿಕೆ ಇಲಾಖೆಯ 6.10 ಎಕರೆ ಮತ್ತು ಹಾಪ್‍ಕಾಮ್ಸ್ ವ್ಯಾಪ್ತಿಯ 0.20 ಎಕರೆ ಸೇರಿ ಒಟ್ಟು 6.30 ಎಕರೆ ಜಮೀನನ್ನು ನೂತನ ಜಿಲ್ಲಾಧಿಕಾರಿಗಳ ನಿರ್ಮಾಣಕ್ಕೆ ನೀಡಲು ತೀರ್ಮಾನಿಸಲಾಗಿರುತ್ತದೆ.
ತೋಟಗಾರಿಕೆ ಇಲಾಖೆಗೆ ಈ ಜಮೀನಿನ ಬದಲಾಗಿ ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಚಿಕ್ಕಪುರ ಗ್ರಾಮದ ರಿ.ಸ.ನಂ.96 ಮತ್ತು ರಿ.ಸ.ನಂ.101 ರಲ್ಲಿ 20.00 ಎಕರೆ ಜಮೀನನ್ನು ಸರ್ಕಾರದಿಂದ ನೀಡಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ.
ಈಗ ಇರುವ ತೋಟಗಾರಿಕೆ ಇಲಾಖೆ ಕಚೇರಿಗೆ, ಇದೇ ಜಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿಯೇ ಸ್ಥಳಾವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ.

