ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಯಾಪುರ (ಪೀಪಲ್‌ಕೋಟಿ) ಬಳಿ THDC ಜಲವಿದ್ಯುತ್ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ಸುರಂಗದಲ್ಲಿ ಗುರುವಾರ ಸಂಜೆ ಭೀಕರ ಅವಘಡ ಸಂಭವಿಸಿದೆ.
ಅನಿರೀಕ್ಷಿತವಾಗಿ ಗುಡ್ಡ ಕುಸಿದು, ಭಾರಿ ಪ್ರಮಾಣದ ಮಣ್ಣು ಹಾಗೂ ನೀರು ಏಕಾಏಕಿ ಸುರಂಗದೊಳಗೆ ನುಗ್ಗಿದ ಪರಿಣಾಮ, ಒಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಈ ದುರಂತದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ವೇಳೆ HCC ಸಂಸ್ಥೆ ನಿರ್ಮಿಸುತ್ತಿದ್ದ ಈ ಸುರಂಗದಲ್ಲಿ ಒಟ್ಟು 22 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈವರೆಗೆ 21 ಕಾರ್ಮಿಕರ ಪತ್ತೆಯಾಗಿದ್ದು, ಸುರಂಗದೊಳಗೆ ಸಿಲುಕಿರುವ ಮತ್ತೊಬ್ಬ ಕಾರ್ಮಿಕನಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರಿದಿದೆ.
NDRF, SDRF, ಸೇನೆ ಕಾರ್ಯಾಚರಣೆ
ಸಂಜೆ ಸುಮಾರು 6:45ರ ವೇಳೆಗೆ ಅಪಘಾತ ಸಂಭವಿಸಿದ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಭಾರತೀಯ ಸೇನೆ, ITBP ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.ಸುರಂಗದೊಳಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಕೆಸರು ತುಂಬಿರುವ ಹಿನ್ನೆಲೆಯಲ್ಲಿ SDRF ತಂಡಗಳು ವಿಶೇಷ ಡ್ರಮ್ ಬೋಟ್‌ಗಳ ಮೂಲಕ ಸುರಂಗದೊಳಗೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಹೆವಿ ಮೆಷಿನರಿಗಳ ಮೂಲಕ ಮಣ್ಣು ತೆರವುಗೊಳಿಸುವ ಜೊತೆಗೆ, ಸುರಂಗದೊಳಗೆ ನುಗ್ಗಿರುವ ನೀರನ್ನು ಪಂಪ್‌ಗಳ ಮೂಲಕ ಹೊರಹಾಕಲಾಗುತ್ತಿದೆ.
ಗಾಯಗೊಂಡಿರುವ 14 ಕಾರ್ಮಿಕರನ್ನು ಸಮೀಪದ ಗೋಪೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡುತ್ತಿರುವ ಸಿಎಂ ಧಾಮಿ
ಈ ದುರಂತದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಕೊನೆಯ ಕಾರ್ಮಿಕನನ್ನೂ ಸುರಕ್ಷಿತವಾಗಿ ಹೊರತೆಗೆಯುವುದು ಸರ್ಕಾರದ ಪ್ರಮುಖ ಆದ್ಯತೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಸಿಲುಕಿರುವ ಕಾರ್ಮಿಕರಲ್ಲಿ ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳವರೂ ಇರುವ ಹಿನ್ನೆಲೆಯಲ್ಲಿ, ಸಿಎಂ ಧಾಮಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯ ಮಾಹಿತಿ ನೀಡಿದ್ದಾರೆ. ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್ ಅವರು ಸ್ಥಳದಲ್ಲೇ ಇದ್ದು, ರಕ್ಷಣಾ ತಂಡಗಳಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕನನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

