ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನ ಹೆಚ್ಚಿಸುವ ಪ್ರಸ್ತಾವಕ್ಕೆ ಅರ್ಥಿಕ ಇಲಾಖೆ ಅನುಮತಿ ನೀಡಿಲ್ಲ. ಈಗ ಮತ್ತೆ ಪ್ರಸ್ತಾವ ಸಲ್ಲಿಸಿ, ಅನುಮತಿ ಪಡೆದು ಗೌರವಧನವನ್ನು ಶೀಘ್ರವೇ ಹೆಚ್ಚಿಸುತ್ತೇವೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಸುನಿಲ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್, ಸದಸ್ಯರಿಗೆ ನೀಡುತ್ತಿರುವ ಗೌರವಧನ ಹೆಚ್ಚಿಸಲು ಆರ್ಥಿಕ ಇಲಾಖೆ ಅನುಮೋದನೆ ಕೇಳಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮೇಯರ್ ಮತ್ತು ಉಪಮೇಯರ್ ಗೌರವಧನ ಕಡಿಮೆ ಇದೆ. ಪ್ರಸ್ತುತ ನೀಡುತ್ತಿರುವ ಗೌರವ ಧನವನ್ನು ಪರಿಷ್ಕರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಗೌರವಧನ ಪರಿಷ್ಕರಿಸುವ ಪ್ರಸ್ತಾವನೆ ಒಪ್ಪಿಲ್ಲ. ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
