ನವದೆಹಲಿ: ಸುಪ್ರೀಂ ಕೋರ್ಟ್ ಕಲಾಪಗಳನ್ನು ಹಿಂದಿ ಭಾಷೆಯಲ್ಲಿಯೂ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕಲಾಪಗಳು ಇಂಗ್ಲಿಷ್ ನಲ್ಲಿ ಮಾತ್ರ ನಡೆಯಬೇಕು ಎಂಬ ವಿಚಾರದ ಕುರಿತ ಸಂವಿಧಾನದ 348(1) ವಿಧಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತಿರಸ್ಕರಿಸಿದೆ.
ಹಿಂದಿ ಭಾಷೆಗೆ ಮಾತ್ರ ಏಕೆ ಪ್ರಾಮುಖ್ಯತೆ ಕೊಡುತ್ತಿದ್ದೀರಿ? ವೈವಿಧ್ಯತೆ ಇರುವ ಭಾರತದ ಎಲ್ಲಾ ರಾಜ್ಯಗಳಿಂದಲೂ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಹಾಗಾದರೆ ನಾವು ಸಂವಿಧಾನದಲ್ಲಿ ಮಾನ್ಯತೆ ಪಡೆದಿರುವ ಎಲ್ಲಾ ಭಾಷೆಗಳಲ್ಲಿಯೂ ಕಲಾಪ ನಡೆಸಬೇಕೇ ಎಂದು ಅರ್ಜಿದಾರರನ್ನು ನ್ಯಾಯಪೀಠ ಪ್ರಶ್ನಿಸಿದ್ದು, ಹಿಂದಿಯಲ್ಲೂ ಕಲಾಪ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.