ಉಡುಪಿ: ರಾಜ್ಯದಲ್ಲಿ ಮತ್ತೆ ಹಿಜಾಬ್ ವಿಚಾರ ಮುನ್ನೆಲೆಗೆ ಬಂದಿದೆ. ಶಾಲಾ ಸಮವಸ್ತ್ರ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಹೊಸ ಆದೇಶ ಇಂತದ್ದೊಂದು ವಿವಾದ ಮತ್ತೆ ಶುರುವಾಗುವಂತೆ ಮಾಡಿದೆ. ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿರುವ ಸರ್ಕಾರ ಕೇಸರಿ ಶಾಲು, ಸಿಂಧೂರ, ಕುಂಕುಮ, ತಿಲಕದ ವಿಚಾರವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಸರ್ಕಾರ ಹೊಸ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಮುಖಂಡ ಸುನೀಲ್ ಕೆ.ಆರ್ , ಸರ್ಕಾರ ಇಸ್ಲಾಮಿಕರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ಓಲೈಕೆಯೆ ಬಹು ಮುಖ್ಯವಾದಂತಿದೆ. ಮೂಲಭೂತವಾದಿ ಸಂಘಟನೆಗಳ ಜೊತೆಗೆ ರಾಜ್ಯ ಸರ್ಕಾರ ನಿಂತಿದೆ ಎಂದು ಕಿಡಿಕಾರಿದ್ದಾರೆ.
ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ನಿರ್ಧಾರದ ಹಿಂದೆ ಬಹಳ ದೊಡ್ಡ ಷಡ್ಯಂತ್ರವಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಬೇಕು. ಇಲ್ಲವಾದರೆ ಉಗ್ರ ಹೋರಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

