ಬೆಂಗಳೂರು: ಅಪ್ರಾಪ್ತೆ ಜತೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅಪರಾಧ ಎಂದು ಹೈಕೋರ್ಟ್ ಹೇಳಿದ್ದು, ಅಪ್ರಾಪ್ತೆಯ ಸಮ್ಮತಿಯು ಆರೋಪಿಗೆ ರಕ್ಷಣೆ ಒದಗಿಲ್ಲ ಎಂದು ತಿಳಿಸಿದೆ.
ಕಾನೂನಿನ ದೃಷ್ಟಿಯಲ್ಲಿ ಅಪ್ರಾಪ್ತೆ ಬಾಲಕಿ ಜೊತೆಗಿನ ಸಮ್ಮತಿಯ ಲೈಂಗಿಕ ಕ್ರಿಯೆ ಮಾನ್ಯವಲ್ಲ, ಲೈಂಗಿಕ ಕ್ರಿಯೆಗೆ ಸಂತ್ರಸ್ತೆಯ ಸಮ್ಮತಿಯಿತ್ತು ಎನ್ನುವ ಕಾರಣಕ್ಕೆ ಆರೋಪವನ್ನು ಕೈಬಿಡಲಾಗದು ಎಂದು ಹೈಕೋರ್ಟ್ ಹೇಳಿದ್ದು, ಅಪ್ರಾಪ್ತೆ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧ ಸಂಬಂಧ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಮಂಡ್ಯ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಆರೋಪಿ ಈ ಆದೇಶ ಪ್ರತಿ ದೊರೆತ ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು. ತಪ್ಪಿದರೆ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯ ಅಪರಾಧಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಸೂಚಿಸಿದೆ.
ಆರೋಪಿ ಮತ್ತು ಸಂತ್ರಸ್ತೆಯ ಮಧ್ಯೆ ಸಮ್ಮತಿ ಮೇರೆಗೆ ಲೈಂಗಿಕ ಕ್ರಿಯೆ ನಡೆದಿದೆ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ಸರಿ ಎಂಬ ಆರೋಪಿ ಪರ ವಕೀಲ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಸಂತ್ರಸ್ತೆಯ ಜನನ ಪ್ರಮಾಣ ಪತ್ರ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪ್ರಕಾರ ಘಟನೆ ನಡೆದಾಗ ಆಕೆಗೆ 16 ವರ್ಷ. ಇದರಿಂದ ಪೋಕ್ಸೋ ಕಾಯ್ದೆಯಡಿ ಆಕೆ ಅಪ್ರಾಪ್ತೆ ಆಗಲಿದ್ದಾರೆ. ಸಂತ್ರಸ್ತೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದಾಗ ಲೈಂಗಿಕ ಕ್ರಿಯೆಗೆ ಆಕೆಯ ಸಮ್ಮತಿ ಇದೆಯೋ ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ. ಅಪ್ರಾಪ್ತೆ ಸಮ್ಮತಿಯನ್ನು ರಕ್ಷಣೆಯಾಗಿ ಪಡೆಯಲು ಆರೋಪಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಯು ಸಂತ್ರಸ್ತೆಗೆ ಗರ್ಭಪಾತ ಮಾಡಿಸಿದ್ದ. ಭ್ರೂಣಕ್ಕೆ ಆರೋಪಿ ಮತ್ತು ಸಂತ್ರಸ್ತೆಯೇ ಜೈವಿಕ ತಂದೆ-ತಾಯಿ ಎಂದು ಡಿಎನ್ಎ ವರದಿ ದೃಢಪಡಿಸಿದೆ. ಸಂತ್ರಸ್ತೆಯ ವಯಸ್ಸು ಮತ್ತು ಡಿಎನ್ಎ ಸಾಕ್ಷ್ಯಗಳನ್ನು ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನು ಬಾಹಿರ ಎಂದು ಹೈಕೋರ್ಟ್ ಕಿಡಿಕಾರಿದೆ.
2 ಸಾವಿರ ಸಹಾಯಕ ಪ್ರಾಧ್ಯಾಪಕರು ಸೇರಿ 72 ಸಾವಿರ ಹುದ್ದೆಗಳಿಗೆ ನೇಮಕಾತಿ: 90 ಸಾವಿರ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎರಡು ಸಾವಿರ ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಕೆಇಎ ಮೂಲಕ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿನ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 90 ಸಾವಿರ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಉಚಿತ ತರಬೇತಿ ನೀಡಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ’ ಯೋಜನೆ ಜಾರಿಮಾಡಲಾಗುತ್ತಿದೆ. ಇದಕ್ಕೆ ಗುರುವಾರ ಚಾಲನೆ ನೀಡಲಾಗುತ್ತಿದೆ. ನೇಮಕಾತಿ ಸ್ಪರ್ಧಾರ್ಥಿಗಳು ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾದ ನಂಬರ್ ಬಳಸಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಬಹುದು ಎಂದು ಮಾಹಿತಿ ನೀಡಿದ್ದಾರೆ.

