HomeKarnatakaದೇವಾಲಯಗಳ ನಿರ್ವಹಣೆಗೆ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್

ದೇವಾಲಯಗಳ ನಿರ್ವಹಣೆಗೆ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್

ಬೆಂಗಳೂರು: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಕಲಿ ರಸೀದಿಗಳನ್ನು ನೀಡಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ರಾಜೇಶ್ ನಾಯಕ್ ಅವರನ್ನು ಸೇವೆಯಿಂದ ವಜಾಗೊಳಿಸಿರುವ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ದೇವರ, ಭಕ್ತರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು ದೇವರಿಗೆ ಎಸಗುವ ವಂಚನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ರಾಜ್ಯದ ಮುಜರಾಯಿ ದೇವಾಲಗಳ ನಿರ್ವಹಣೆಗೆ ಹೈಕೋರ್ಟ್ ಮಾರ್ಗಸೂಚಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೇವೆಯಿಂದ ವಜಾಗೊಳಿಸಿದನ್ನು ಪ್ರಶ್ನಿಸಿ ರಾಜೇಶ್ ನಾಯಕ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು, ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ರಾಜೇಶ್ ನಾಯಕ್ ಅರ್ಜಿ ವಜಾಗೊಳಿಸಿದೆ.

ಅರ್ಜಿದಾರ ರಾಜೇಶ್ ನಾಯಕ್ 2018ರ ಆಗಸ್ಟ್ 23 ರಿಂದ 25ರ ಅವಧಿಯಲ್ಲಿ ಐಟಿ ಅಡ್ಮಿನ್‌ ಅವರ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡಿದ್ದರು. ದುರ್ಗಾ ಪರಮೇಶ್ವರಿ ದೇವಾಲದಲ್ಲಿನ ದೇವರ ಸರ್ವಾಲಂಕಾರ ಪೂಜೆ ಹಾಗೂ ‘ಹೂವಿನ ಪೂಜೆ’ಗೆ ಬಂದ ಭಕ್ತರಿಗೆ ನಕಲಿ ರಸೀದಿಗಳನ್ನು ನೀಡಿದ್ದರು. ಸಂಗ್ರಹವಾದ ಹಣವನ್ನು ದೇವಾಲಯದ ಖಾತೆಗೆ ಜಮಾ ಮಾಡದೆ ದುರುಪಯೋಗ ಪಡಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಉಪವಿಭಾಗಾಧಿಕಾರಿಗಳು (ಎಸಿ) ವರದಿ ನೀಡಿದ ಬಳಿಕ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ರಾಜೇಶ್ ನಾಯಕ್​ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದರು. ಈ ವಜಾ ಆದೇಶವನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ರಾಜೇಶ್​ ನಾಯಕ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜೇಶ್ ನಾಯಕ್ ವಜಾ ಆದೇಶ ಎತ್ತಿ ಹಿಡಿದಿದೆ.

ಇದೇ ವೇಳೆ ರಾಜ್ಯದ ಮುಜರಾಯಿ ದೇವಾಲಯಗಳ ಆದಾಯ ಸೋರಿಕೆ ತಡೆಯಲು ಮತ್ತು ಪಾರದರ್ಶಕತೆ ತರಲು ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆ ಜಾರಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕಟ್ಟುನಿಟ್ಟಿನ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ಹೊರಡಿಸಿದೆ.

ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಆರೋಪಿ ರಾಜೇಶ್​ ನಾಯಕ್​ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. ದೇವಾಲಯಕ್ಕೆ ಬರುವ ಭಕ್ತರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು ದೇವರಿಗೇ ಎಸಗುವ ವಂಚನೆಯಾಗಿದೆ. ನಂಬಿಕೆಯ ಹುದ್ದೆಯಲ್ಲಿದ್ದು ಭ್ರಷ್ಟಾಚಾರ ಎಸಗಿದಾಗ ವಜಾ ಶಿಕ್ಷೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣ ಸಂಬಂಧ ಮುಜರಾಯಿ ಇಲಾಖೆಯ ಪರವಾಗಿ ವಕೀಲ ಹರೀಶ್ಚಂದ್ರ ಮೋವ್ವಾರ್ ವಾದ ಮಂಡಿಸಿದ್ದರು.

ದೇವಾಲಯಗಳ ನಿರ್ವಹಣೆಗೆ ಹೈಕೋರ್ಟ್ ನೀಡಿದ ಮಾರ್ಗಸೂಚಿಗಳು:

ಪ್ರಕರಣದ ವಿಚಾರಣೆ ವೇಳೆ ದೇವಾಲಯಗಳಲ್ಲಿ ನಡೆಯುವ ಆರ್ಥಿಕ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು, ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ತಡೆಯಲು ಇ-ಆಡಳಿತ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

* ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಸೇವಾ ಟಿಕೆಟ್, ಕಾಣಿಕೆ, ಹುಂಡಿ, ವಸತಿ ನಿಲಯ ಹಾಗೂ ಇತರೆ ಆದಾಯ ಸಂಗ್ರಹ ಮತ್ತು ವೆಚ್ಚಗಳನ್ನು ನೈಜ ಸಮಯದಲ್ಲಿ ನಮೂದಿಸುವ ಹಾಗೂ ಪರಿಶೀಲನೆಗೊಳಪಡಿಸುವ ಕೇಂದ್ರೀಕೃತ ತಂತ್ರಾಂಶ ರೂಪಿಸಬೇಕು.

* ಪ್ರತಿಯೊಂದು ರಸೀದಿಗೂ ಯಂತ್ರ-ಚಾಲಿತ ವಿಶಿಷ್ಟ ಸರಣಿ ಸಂಖ್ಯೆ ಇರಬೇಕು. ರಸೀದಿಯ ಸತ್ಯಾಸತ್ಯತೆಯನ್ನು ಭಕ್ತರು ತಕ್ಷಣವೇ ತಮ್ಮ ಮೊಬೈಲ್ ಮೂಲಕ ಪರಿಶೀಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಇರಬೇಕು.

* ಒಂದೇ ಸರಣಿ ಸಂಖ್ಯೆಯ ರಸೀದಿಯನ್ನು ಎರಡನೇ ಬಾರಿ ಮುದ್ರಿಸಲು ವ್ಯವಸ್ಥೆಯಲ್ಲಿ ಅವಕಾಶವಿರಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಯ ಅನುಮೋದನೆ ಪಡೆದು ರಸೀದಿಯ ಎರಡನೇ ಬಾರಿ ಮುದ್ರಿಸಲು ಅವಕಾಶ ನೀಡಬೇಕು.

* ಯುಪಿಐ, ಕ್ಯೂಆರ್ ಕೋಡ್, ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡುವುದನ್ನು ಉತ್ತೇಜಿಸುವ ಮೂಲಕ ನಗದು ನಿರ್ವಹಣೆಯನ್ನು ಕನಿಷ್ಠಗೊಳಿಸಬೇಕು.

ಹುಂಡಿ ಎಣಿಕೆ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿರಬೇಕು. ಎಣಿಕೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ‘ಬಾಡಿ ಕ್ಯಾಮರಾ’ ಧರಿಸುವುದನ್ನು ಕಡ್ಡಾಯಗೊಳಿಸಬೇಕು.

* ದೇವಾಲಯದ ಚಿನ್ನಾಭರಣ, ಬೆಳ್ಳಿ ಮತ್ತು ಅಮೂಲ್ಯ ವಸ್ತುಗಳ ತೂಕ, ವಿವರ ಹಾಗೂ ಉನ್ನತ ಗುಣಮಟ್ಟದ ಫೋಟೋಗಳನ್ನೊಳಗೊಂಡ ಡಿಜಿಟಲ್ ದಾಸ್ತಾನು ವ್ಯವಸ್ಥೆ ಜಾರಿ ಮಾಡಬೇಕು.

ಈ ಎಲ್ಲ ಮಾರ್ಗಸೂಚಿಗಳು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ದೇವಾಲಯಗಳಿಗೂ ಅನ್ವಯಿಸಲಿದ್ದು, ಸಾರ್ವಜನಿಕ ಆಸ್ತಿ ಮತ್ತು ಭಕ್ತರ ಕಾಣಿಕೆಯನ್ನು ರಕ್ಷಿಸಲು ಈ ಕ್ರಮ ಅಗತ್ಯ ಎಂದು ಹೈಕೋರ್ಟ್ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular