ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಎಂಬುದು ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ದಾರಿಯಲ್ಲ ಅದು ಸಾವಿನ ದವಡೆಯಿಂದ ಪಾರು ಮಾಡುವ ಅಸಲಿ ಸುರಕ್ಷಾ ಕವಚ. ಆದರೆ ಹೆಲ್ಮೆಟ್ ಧರಿಸುವವರಲ್ಲಿ ಹೆಚ್ಚಿನವರು ಅದರ ಗುಣಮಟ್ಟ ಮತ್ತು ಬಾಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ನೆನಪಿರಲಿa ನಿಮ್ಮ ಹೆಲ್ಮೆಟ್ ಹಳೆಯದಾದಷ್ಟೂ ಅದರ ರಕ್ಷಣಾ ಸಾಮರ್ಥ್ಯ ಕುಸಿಯುತ್ತಾ ಹೋಗುತ್ತದೆ
1.ಹೆಲ್ಮೆಟ್‌ಗೂ ಇದೆಯಾ ಎಕ್ಸ್‌ಪೈರಿ ಡೇಟ್?
ಹೌದು ಆಹಾರ ಪದಾರ್ಥಗಳಂತೆ ಹೆಲ್ಮೆಟ್‌ಗಳಿಗೂ ಕಾಲಾವಧಿ ಇರುತ್ತದೆ. ಮೇಲ್ನೋಟಕ್ಕೆ ಎಷ್ಟೇ ಸುಂದರವಾಗಿ ಕಂಡರೂ, ಸಮಯ ಕಳೆದಂತೆ ಅದರಲ್ಲಿ ಬಳಸಲಾದ ಪ್ಲಾಸ್ಟಿಕ್ ಮತ್ತು ಫೈಬರ್ ವಸ್ತುಗಳು ತಮ್ಮ ರಕ್ಷಣಾತ್ಮಕ ಗುಣವನ್ನು ಕಳೆದುಕೊಳ್ಳುತ್ತವೆ.
ಥರ್ಮೋಪ್ಲಾಸ್ಟಿಕ್ ಹೆಲ್ಮೆಟ್: ಇವು ಸಾಮಾನ್ಯವಾಗಿ 5 ವರ್ಷಗಳವರೆಗೆ ಉತ್ತಮವಾಗಿ ಕೆಲಸ ಮಾಡುತ್ತವೆ.
ಇತರ ಗುಣಮಟ್ಟದ ಹೆಲ್ಮೆಟ್: ಇವುಗಳ ಜೀವಿತಾವಧಿ ಸುಮಾರು 9 ವರ್ಷಗಳವರೆಗೂ ಇರುತ್ತದೆ.
2.ಒಂದೇ ಒಂದು ಬಾರಿ ಕೆಳಗೆ ಬಿದ್ದರೂ ಅಷ್ಟೇ ಕಥೆ
ನಿಮ್ಮ ಹೆಲ್ಮೆಟ್ ಸುಮಾರು ಒಂದೂವರೆ ಮೀಟರ್ ಎತ್ತರದಿಂದ ಕೆಳಗೆ ಬಿದ್ದರೆ ಅಥವಾ ಒಮ್ಮೆಯಾದರೂ ಅಪಘಾತಕ್ಕೆ ಈಡಾಗಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ಹೊರಗಿನಿಂದ ಏನೂ ಆಗಿಲ್ಲ ಅನ್ನಿಸಿದರೂ ಒಳಗಿನ ಸುರಕ್ಷತಾ ಕವಚದಲ್ಲಿ (Styrofoam) ಸೂಕ್ಷ್ಮ ಬಿರುಕುಗಳು ಮೂಡಿರುತ್ತವೆ. ಇದು ಮುಂದಿನ ಬಾರಿ ಅಪಘಾತವಾದಾಗ ನಿಮ್ಮ ತಲೆಯನ್ನು ರಕ್ಷಿಸಲಾರದು.
3.ವೈಸರ್ (Visor) ಮತ್ತು ಸ್ಟ್ರಾಪ್ ಬಗ್ಗೆ ಇರಲಿ ಎಚ್ಚರ
ಗೀರುಗಳಿದ್ದರೆ ಅಪಾಯ: ವೈಸರ್ ಮೇಲೆ ಗೀರುಗಳಿದ್ದರೆ ರಾತ್ರಿ ವೇಳೆ ಎದುರಿನ ವಾಹನಗಳ ಬೆಳಕು ಚದುರಿ ರಸ್ತೆ ಕಾಣಿಸದಂತಾಗುತ್ತದೆ.
ಟೇಪ್ ಹಚ್ಚಬೇಡಿ: ಅನೇಕರು ಹೆಲ್ಮೆಟ್ ಮುರಿದರೆ ಟೇಪ್ ಅಂಟಿಸಿ ಬಳಸುತ್ತಾರೆ. ಇದು ಅತ್ಯಂತ ಅಪಾಯಕಾರಿ. ಮುರಿದ ಹೆಲ್ಮೆಟ್ ಕೇವಲ ಪ್ಲಾಸ್ಟಿಕ್ ತುಂಡಿನಂತೆ ಕೆಲಸ ಮಾಡುತ್ತದೆಯೇ ಹೊರತು ಪ್ರಾಣ ಉಳಿಸುವುದಿಲ್ಲ.
4.ನಿಮ್ಮ ಹೆಲ್ಮೆಟ್ ಎಕ್ಸ್‌ಪೈರ್ ಆಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?
ಒಳಭಾಗದ ಪರೀಕ್ಷೆ: ಹೆಲ್ಮೆಟ್ ಒಳಗಿರುವ ಫೋಮ್ ಅನ್ನು ಬೆರಳಿನಿಂದ ಮೆಲ್ಲಗೆ ಒತ್ತಿ ನೋಡಿ. ಅದು ಮತ್ತೆ ತನ್ನ ಹಳೆಯ ಸ್ಥಿತಿಗೆ ಮರಳದಿದ್ದರೆ, ಆ ಹೆಲ್ಮೆಟ್ ಶಕ್ತಿ ಕಳೆದುಕೊಂಡಿದೆ ಎಂದರ್ಥ.
ಹೊರಭಾಗದ ಸ್ಥಿತಿ: ಮೇಲ್ಪದರ ಬಿಟ್ಟು ಬರುತ್ತಿದ್ದರೆ ಅಥವಾ ಆಳವಾದ ಗೀರುಗಳಿದ್ದರೆ ಅದು ಅಪಾಯದ ಮುನ್ಸೂಚನೆ.
ಹೊಸ ಹೆಲ್ಮೆಟ್ ಖರೀದಿಸುವಾಗ ಈ 4 ವಿಷಯ ನೆನಪಿರಲಿ:
ISI ಮಾರ್ಕ್: ಅಧಿಕೃತ ಮುದ್ರೆ ಇರುವ ಗಟ್ಟಿಮುಟ್ಟಾದ ಹೆಲ್ಮೆಟ್ ಮಾತ್ರ ಆರಿಸಿಕೊಳ್ಳಿ.
ಸರಿಯಾದ ಫಿಟ್ಟಿಂಗ್: ಹೆಲ್ಮೆಟ್ ತಲೆಗೆ ಸರಿಯಾಗಿ ಕುಳಿತುಕೊಳ್ಳಬೇಕು, ಸಡಿಲವಾಗಿದ್ದರೆ ಪ್ರಯೋಜನವಿಲ್ಲ.
ಕ್ವಾಲಿಟಿ ಸ್ಟ್ರಾಪ್: ಬೆಲ್ಟ್ ಗಟ್ಟಿಯಾಗಿರಲಿ ಮತ್ತು ಲಾಕ್ ವ್ಯವಸ್ಥೆ ಸುಲಭವಾಗಿರಲಿ.
ಬಿಸಿಲಿನಿಂದ ರಕ್ಷಿಸಿ: ಹೆಲ್ಮೆಟ್ ಅನ್ನು ಅತಿಯಾದ ಬಿಸಿಲಿನಲ್ಲಿ ಬಿಡಬೇಡಿ, ಇದು ಅದರ ಮೆಟೀರಿಯಲ್ ಅನ್ನು ಬೇಗನೆ ಹಾಳುಮಾಡುತ್ತದೆ.

