ಸಂಪತ್ತಿನ ಆಸೆಗಾಗಿ ಘೋರ ಕೃತ್ಯ: ಸ್ನೇಹ ಬೆಳೆಸಿ ಮಾಟ-ಮಂತ್ರಕ್ಕಾಗಿ ಶಿರಚ್ಛೇದ ಮಾಡಿದ ಯುವಕರು…!

ಮಾಟ-ಮಂತ್ರಕ್ಕಾಗಿ ಮಕ್ಕಳನ್ನು ಬಲಿಕೊಟ್ಟಿರುವ ಅನೇಕ ಪ್ರಕರಣಗಳು ನಡೆದಿವೆ. ಇದೀಗ ದೆಹಲಿಯಲ್ಲಿ ಸಂಪತ್ತಿನ ಆಸೆಗಾಗಿ ಇಬ್ಬರು ದುಷ್ಕರ್ಮಿಗಳು 29 ವರ್ಷದ ಯುವಕನ ಶಿರಚ್ಛೇದ ಮಾಡಿದ್ದಾರೆ. ಮಾಟ ಮಂತ್ರದ ಮೂಲಕ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ.

ಶಂಕಿತ ಆರೋಪಿಗಳಾದ ವಿಕಾಸ್ ಗುಪ್ತಾ (24) ಮತ್ತು ಧನಂಜಯ್ ಸೈನಿ (22) ಮೂಲತಃ ಮುಜಾಫರ್‌ ನಗರದವರು. ವಿಕಾಸ್‌ ಆಟೋ ಓಡಿಸುತ್ತಿದ್ದ, ಧನಂಜಯ್‌ ಸೈನಿ ಹೋಟೆಲ್‌ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಒಮ್ಮೆಲೇ ಶ್ರೀಮಂತರಾಗಬೇಕು ಎಂಬ ಆಸೆ ಇವರಲ್ಲಿ ಮೂಡಿತ್ತು. ಇದಕ್ಕಾಗಿ ಪರಮಾತ್ಮ ಎಂಬ ಇ-ರಿಕ್ಷಾ ಚಾಲಕನ ಸಲಹೆಯನ್ನು ಕೇಳಿದ್ದಾರೆ. ಆತ ತಾನು ಮಾಟಮಂತ್ರದಲ್ಲಿ ನಿಪುಣನೆಂದು ಹೇಳಿಕೊಂಡಿದ್ದ. ಯಾವುದೇ ಒಬ್ಬ ಅನಾಥನ ಕತ್ತರಿಸಿದ ತಲೆಯನ್ನು ತಂದುಕೊಟ್ಟರೆ ತಲಾ 5 ಲಕ್ಷ ರೂಪಾಯಿ ಗಳಿಸಬಹುದು ಎಂದು ಪರಮಾತ್ಮ ಇಬ್ಬರಿಗೂ ಮನವರಿಕೆ ಮಾಡಿಕೊಟ್ಟ.

ಆತನ ಮಾತನ್ನು ನಂಬಿದ ವಿಕಾಸ್‌ ಹಾಗೂ ಧನಂಜಯ್‌ ಫುಡ್‌ ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಟಾರ್ಗೆಟ್‌ ಮಾಡಿದ್ದಾರೆ. ಬಿಹಾರದ ಮೋತಿಹಾರಿ ಮೂಲದ ರಾಜು ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ. ಸಂಬಂಧಿಗಳೊಂದಿಗೂ ಆತ ಸಂಪರ್ಕದಲ್ಲಿರಲಿಲ್ಲ. ಅಷ್ಟೇ ಅಲ್ಲ ಮಾದಕ ವಸ್ತುಗಳ ವ್ಯಸನಿಯೂ ಆಗಿದ್ದ. ವಿಕಾಸ್‌ ಹಾಗೂ ಧನಂಜಯ್‌ ಆತನಿಗೆ ಮದ್ಯ ತಂದುಕೊಡುವ ಮೂಲಕ ಸ್ನೇಹ ಬೆಳೆಸಿದ್ದಾರೆ.

ಡ್ರಗ್ಸ್‌ ಮತ್ತು ಮದ್ಯದ ಆಸೆ ತೋರಿಸಿ ಜೂನ್ 22 ರಂದು ರಾಜುವನ್ನು ಜಿಟಿಬಿ ಎನ್‌ಕ್ಲೇವ್‌ನಲ್ಲಿರುವ ತಮ್ಮ ಬಾಡಿಗೆ ಕೋಣೆಗೆ ಕರೆದೊಯ್ದಿದ್ದಾರೆ. ಕುಡಿದ ಅಮಲಿನಲ್ಲಿದ್ದ ರಾಜುವನ್ನು ಹತ್ಯೆ ಮಾಡಿದ್ದಾರೆ. ವಿಕಾಸ್‌, ಧನಂಜಯ್‌ ಹಾಗೂ ಪರಮಾತ್ಮ ಮೂವರು ಸೇರಿಕೊಂಡು ರಾಜುವನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಶವವನ್ನು ಗಾಜಿಯಾಬಾದ್‌ನ ಪಂಚಶೀಲ ಬಳಿಯ ಅರಣ್ಯ ಪ್ರದೇಶಕ್ಕೆ ಸಾಗಿಸಿದರು. ಅಲ್ಲಿ ಚಾಕುವಿನಿಂದ ತಲೆ ಕಡಿದು, ತಲೆಯನ್ನು ಬಕೆಟ್‌ನಲ್ಲಿ ಇರಿಸಿಕೊಂಡು, ರುಂಡವಿಲ್ಲದ ದೇಹವನ್ನು ಪೊದೆಗಳಲ್ಲಿ ಎಸೆದಿದ್ದರು.

ನಂತರ ಮೂವರೂ ತಮ್ಮ ಬಾಡಿಗೆ ಕೋಣೆಯಲ್ಲಿ ರಾಜುವಿನ ಕತ್ತರಿಸಿದ ತಲೆಯೊಂದಿಗೆ ಕರಾಳ ಆಚರಣೆಯನ್ನು ಮಾಡಿದ್ದಾರೆ. ತಲೆಯಿಲ್ಲದ ದೇಹ ಪೊಲೀಸರ ಕಣ್ಣಿಗೆ ಬಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಶವದ ಫೋಟೋಗಳನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿತ್ತು, ರಾಜುವಿನ ಸಂಬಂಧಿಯೊಬ್ಬರು ಅದನ್ನು ಗುರುತಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಗುಪ್ತಾ ಮತ್ತು ಸೈನಿ ತಾವು ಎಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಇನ್ನೋರ್ವ ಆರೋಪಿ ಮಾಸ್ಟರ್ ಮೈಂಡ್ ಪರಮಾತ್ಮ ತಲೆಮರೆಸಿಕೊಂಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read