HomeKarnatakaಡೇಟಿಂಗ್ ಆಪ್ ಮೂಲಕ ಯುವಕನಿಗೆ ಪರಿಚಯ: ಬರೋಬ್ಬರಿ 3.7 ಲಕ್ಷ ರೂಪಾಯಿ ದೋಚಿದ ಯುವತಿ

ಡೇಟಿಂಗ್ ಆಪ್ ಮೂಲಕ ಯುವಕನಿಗೆ ಪರಿಚಯ: ಬರೋಬ್ಬರಿ 3.7 ಲಕ್ಷ ರೂಪಾಯಿ ದೋಚಿದ ಯುವತಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆಪ್ ಮೂಲಕ ಯುವಕ-ಯುವತಿಯರು ಪರಿಚಯಿಸಿಕೊಂಡು ಸ್ನೇಹ, ಸುತ್ತಾಟ ಎಂದು ಓಡಾಡಿ ಮೋಸ ಹೋಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡೇಟಿಂಗ್ ಆಪ್ ಮೂಲಕ ಯುವಕನೊಬ್ಬನಿಗೆ ಪರಿಚಯವಾದ ಯುವತಿ ಆತನಿಂದ ಬರೋಬ್ಬರಿ 3.7 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಲೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಂದಾಪುರ ನಿವಾಸಿಯಾಗಿರುವ ಖಾಸಗಿ ಕಂಪನಿ ಉದ್ಯೋಗಿ 33 ವರ್ಷದ ಜೇಕಬ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ಕಳೆದ ಕೆಲವು ತಿಂಗಳುಗಳಿಂದ ಡೇಟಿಂಗ್ ಆಪ್ ಬಳಸುತ್ತಿದ್ದರು. ಇತ್ತೀಚೆಗೆ ಆತನಿಗೆ ಪೂನಂ ಎಂಬ ಹೆಸರಿನ ಯುವತಿಯ ಪರಿಚಯವಾಗಿತ್ತು. ತಾನು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ಯುವತಿ, ಜೇಕಬ್ ಜೊತೆ ಮೊಬೈಲ್ ಸಂಖ್ಯೆ ಹಂಚಿಕೊಂಡು ಮಾತುಕತೆ ನಡೆಸುತ್ತಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗಸ್ಟ್ 19 ರಂದು ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿಯ ಹುಲಿಮಂಗಲ ಮುಖ್ಯರಸ್ತೆಯಲ್ಲಿರುವ ಪಬ್ ಒಂದರ ಬಳಿ ಸಿಗುವಂತೆ ಪೂನಂ ಆತನನ್ನು ಆಹ್ವಾನಿಸಿದ್ದಳು. ಅದರಂತೆ ರಾತ್ರಿ 9.45 ರ ಸುಮಾರಿಗೆ ಜೇಕಬ್ ಸ್ಥಳಕ್ಕೆ ತಲುಪಿದ್ದಾಗ, ಯುವತಿಯು ಬಿಳಿ ಬಣ್ಣದ ಎಸ್‌ಯುವಿ ಕಾರಿನಲ್ಲಿ ಬಂದಿದ್ದಳು. ಕಾರಿಗೆ ಇಂಧನ ತುಂಬಿಸಿಕೊಂಡು ಬರೋಣ ಎಂದು ಹೇಳಿ ಜೇಕಬ್‌ನನ್ನು ಕಾರಿಗೆ ಹತ್ತಿಸಿಕೊಂಡಿದ್ದಳು.

ಪ್ರಯಾಣದ ಮಧ್ಯೆ, ಶೌಚಾಲಯಕ್ಕೆ ಹೋಗಬೇಕೆಂದು ನೆಪ ಹೇಳಿ ಯುವತಿಯು ಕಾರನ್ನು ಕತ್ತಲಾದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಜೇಕಬ್‌ನನ್ನು ಬೆದರಿಸಿ ಅದೇ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ನಂತರ ಆತನನ್ನು ಮತ್ತೊಂದು ಬೂದು ಬಣ್ಣದ ಕಾರಿಗೆ ಸ್ಥಳಾಂತರಿಸಿ, ನಗರದ ವಿವಿಧೆಡೆ ಸುತ್ತಾಡಿಸಿದ್ದಾರೆ.

ಆರೋಪಿಗಳು ಜೇಕಬ್‌ಗೆ ಕೊಲೆ ಬೆದರಿಕೆ ಹಾಕಿ, ಆತನ ಬಳಿಯಿದ್ದ 7,000 ರೂ. ನಗದು ಸಹಿತ ಪರ್ಸ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಕಸಿದುಕೊಂಡಿದ್ದಾರೆ. ಎಟಿಎಂ ಕೇಂದ್ರಕ್ಕೆ ಕರೆದೊಯ್ದು ಬಲವಂತವಾಗಿ ಪಿನ್ ನಂಬರ್ ಪಡೆದು 45,000 ರೂ. ನಗದು ಡ್ರಾ ಮಾಡಿಕೊಂಡಿದ್ದಾರೆ. ಅಲ್ಲದೆ, ಆತನ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.

ಆಗಸ್ಟ್ 20 ರ ಬೆಳಗಿನ ಜಾವ, ಕಿಡಿಗೇಡಿಗಳು ಜೇಕಬ್‌ನ ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಬದಲಿಸಿ, ಬರೋಬ್ಬರಿ 3.2 ಲಕ್ಷ ರೂಪಾಯಿಯನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಕೊನೆಗೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಜೇಕಬ್‌ನನ್ನು ಇಳಿಸಿ, ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಆಗ ಯುವಕನಿಗೆ ಯುವತಿ ತನಗೆ ಮೋಸ ಮಾಡಿರುವ ಸಂಗತಿ ಅರಿವಾಗಿದೆ.

ಘಟನೆ ಬಗ್ಗೆ ಯುವಕ ಕುಟುಂಬದವರಲ್ಲಿ ವಿಷಯ ತಿಳಿಸಿದ್ದಾನೆ. ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಪಡೆದು ಆಗಸ್ಟ್ 25 ರಂದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಯುವಕನ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ವಂಚಕರ ಜಾಲ ಬಂಧಿಸಲು ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular