ನಿಮ್ಮ ಕಾಲುಗಳು ಪದೇ ಪದೇ ತಣ್ಣಗಾಗುತ್ತಿವೆಯೇ ? ಕಾಲುಗಳಲ್ಲಿ ಭಾರವಾದ ಅನುಭವ ನಿಮಗಾಗುತ್ತಿದೆಯೇ ? ಹಾಗಾದರೆ ನೀವು ಎಚ್ಚರಿಕೆಯಿಂದ ಇರಬೇಕಾದ ಸಮಯವಿದು ! ಏಕೆಂದರೆ ಇದು ಸಾಮಾನ್ಯ ಸಮಸ್ಯೆಯಲ್ಲ, ಬದಲಿಗೆ ‘ varicose veins ‘ ಎಂಬ ರಕ್ತನಾಳಗಳ ಸಮಸ್ಯೆಯ ಲಕ್ಷಣವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
Varicose veins ಎಂದರೆ ಕಾಲುಗಳಲ್ಲಿನ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸದೆ ಉಬ್ಬುವುದು ಮತ್ತು ಊದಿಕೊಳ್ಳುವುದು. ಇದರಿಂದ ಕಾಲುಗಳಲ್ಲಿ ರಕ್ತ ಸರಿಯಾಗಿ ಹರಿಯದೆ ನಿಂತುಬಿಡುತ್ತದೆ. ಇದು ಕೇವಲ ಮೇಲ್ಭಾಗದ ರಕ್ತನಾಳಗಳಿಗಷ್ಟೇ ಅಲ್ಲದೆ, ಆಳವಾದ ಮತ್ತು ಪರ್ಫೊರೇಟರ್ ರಕ್ತನಾಳಗಳಿಗೂ ತೊಂದರೆ ನೀಡಬಹುದು.
ಸಾಮಾನ್ಯವಾಗಿ ಶೇ 2 ರಿಂದ 30 ರಷ್ಟು ವಯಸ್ಕರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಮಹಿಳೆಯರಲ್ಲಿ ಇದರ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಕಾಲುಗಳಲ್ಲಿ ವಿಪರೀತ ಭಾರ, ನೋವು, ಉರಿ ಅಥವಾ ಮಿಡಿಯುವಂತಹ ಅನುಭವ, ತುರಿಕೆ, ಕಾಲುಗಳನ್ನು ಅಲ್ಲಾಡಿಸುತ್ತಿರುವ ಅನಿಸಿಕೆ, ಊತ ಮತ್ತು ಕಾಲು ಸೆಳೆತ ಇದರ ಮುಖ್ಯ ಲಕ್ಷಣಗಳು. ತೀವ್ರವಾದ ಸಂದರ್ಭಗಳಲ್ಲಿ ಕಾಲುಗಳಲ್ಲಿ ಗಾಯಗಳು ಅಥವಾ ಹುಣ್ಣುಗಳು ಸಹ ಉಂಟಾಗಬಹುದು. ಆದರೆ ತೈವಾನ್‌ನ ಚುಂಗ್ ಶಾನ್ ವೈದ್ಯಕೀಯ ವಿಶ್ವವಿದ್ಯಾಲಯದ ತಜ್ಞರು ಹೇಳುವಂತೆ, ಕಾಲುಗಳು ಅತಿಯಾಗಿ ತಣ್ಣಗಾಗುವುದು ಸಹ ಒಂದು ಮಹತ್ವದ ಲಕ್ಷಣವಾಗಿದ್ದು, ಹೆಚ್ಚಿನ ಜನರು ಇದನ್ನು ನಿರ್ಲಕ್ಷಿಸುತ್ತಾರೆ.
‘ಓಪನ್ ಹಾರ್ಟ್’ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ತಣ್ಣನೆಯ ಕಾಲುಗಳನ್ನು ಹೊಂದಿರುವ ಜನರು ಸಾಮಾನ್ಯ ಜನರಿಗಿಂತ varicose veins ಹೊಂದುವ ಸಾಧ್ಯತೆ ಶೇ 49 ರಿಂದ 89 ರಷ್ಟು ಹೆಚ್ಚು. ಅಷ್ಟೇ ಅಲ್ಲ, ಕಾಲುಗಳಲ್ಲಿ ಶೀತ ಮತ್ತು ಭಾರ ಎರಡನ್ನೂ ಅನುಭವಿಸುವವರಿಗೆ ಈ ಸಮಸ್ಯೆ ಬರುವ ಸಾಧ್ಯತೆ ಇನ್ನೂ ಹೆಚ್ಚಿರುತ್ತದೆ ಎಂದು ಅಧ್ಯಯನವು ತಿಳಿಸಿದೆ.
ದೀರ್ಘಕಾಲ ನಿಂತುಕೊಂಡೇ ಕೆಲಸ ಮಾಡುವವರು ಈ ಸಮಸ್ಯೆಗೆ ಸುಲಭವಾಗಿ ತುತ್ತಾಗಬಹುದು. ಅಂತಹವರಿಗೆ varicose veins ಬರುವ ಅಪಾಯವು ಶೇ 45 ರಷ್ಟು ಹೆಚ್ಚಿರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ವಿಶ್ವವಿದ್ಯಾನಿಲಯದ ತಂಡದ ಯುಂಗ್-ಪೋ ಲಿಯಾವ್ ತಮ್ಮ ಲೇಖನದಲ್ಲಿ, “ನಮ್ಮ ಅಧ್ಯಯನವು ಕೆಳಗಿನ ಕಾಲುಗಳಲ್ಲಿ ಮಧ್ಯಮದಿಂದ ತೀವ್ರವಾದ ಶೀತ ಸಂವೇದನೆಯನ್ನು ಕಂಡುಹಿಡಿದಿದೆ, ಇದು ಇಲ್ಲಿಯವರೆಗೆ varicose veins ನೊಂದಿಗೆ ಸಂಬಂಧಿಸಿದ ವೈಯಕ್ತಿಕ ಅನುಭವವಾಗಿ ಸರಿಯಾಗಿ ವರದಿಯಾಗಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಶೋಧನೆಗಾಗಿ 30 ರಿಂದ 70 ವರ್ಷ ವಯಸ್ಸಿನ 8,782 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 676 ಜನರಿಗೆ ಮಧ್ಯಮ ಅಥವಾ ತೀವ್ರವಾದ varicose veins ಇತ್ತು. ಅವರ ಕಾಲುಗಳಲ್ಲಿ ಎಷ್ಟು ಶೀತ ಅನುಭವವಾಗುತ್ತದೆ ಮತ್ತು ಕಾಲುಗಳು ಎಷ್ಟು ಭಾರವೆನಿಸುತ್ತವೆ ಎಂದು ಪ್ರಶ್ನಿಸಲಾಗಿತ್ತು.