ನೆಲಮಂಗಲ: ರಾಜ್ಯದಲ್ಲಿ ಮತ್ತೆ ಹೃದಯಾಘಾತದಿಂದ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿಯ ಅರೆಕತ್ತನಹಳ್ಳಿಯಲ್ಲಿ ನಡೆದಿದೆ.
30 ವರ್ಷದ ಚರಣ್ ಮೃತ ದುರ್ದೈವಿ. ಮನೆಯಲ್ಲಿಯೇ ಚರಣ್ ಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಅವರು ಸಾವನ್ನಪ್ಪಿದ್ದಾಗಿ ದೃಢಪಡಿಸಿದ್ದಾರೆ.
ಹೃದಯಾಘಾತದಿಂದ ಚರಣ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚರಣ್ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪತಿಯನ್ನು ಕಳೆದಿಂಡಿರುವ ಪತ್ನಿಯ ಆಕ್ರಂದನ ಮುಗಿಲುಮುಟ್ಟಿದೆ.

