ಐಡಾಹೋದ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್‌ನಲ್ಲಿ ನಡೆದ ‘ಫೈಟರ್ ಸ್ಕೈಸ್’ ವೈಮಾನಿಕ ಪ್ರದರ್ಶನದಲ್ಲಿ (Airshow) ಯುಎಸ್ ನೌಕಾಪಡೆಯ (US Navy) ಎರಡು ಯುದ್ಧ ವಿಮಾನಗಳು ಪತನಗೊಂಡಿವೆ.
ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್‌ನಲ್ಲಿ ನಡೆದ ಮಿಡ್-ಏರ್ ಕೊಲಿಷನ್ (ಗಾಳಿಯಲ್ಲೇ ಪರಸ್ಪರ ಡಿಕ್ಕಿ) ಘಟನೆಯಲ್ಲಿ ಎರಡೂ ಇಎ-18 (EA-18) ಯುದ್ಧ ವಿಮಾನಗಳಲ್ಲಿದ್ದ ನಾಲ್ಕೂ ಸಿಬ್ಬಂದಿಗಳು ಸುರಕ್ಷಿತವಾಗಿ ಎಜೆಕ್ಟ್ (ವಿಮಾನದಿಂದ ಹೊರ ಜಿಗಿಯುವುದು) ಆಗಿದ್ದಾರೆ.
ಅಮೆರಿಕಾದಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಎರಡು ವಿಮಾನಗಳು ಗಾಳಿಯಲ್ಲೇ ಡಿಕ್ಕಿ ಹೊಡೆದು, ಬೆಂಕಿಯ ಜ್ವಾಲೆಯೊಂದಿಗೆ ನೆಲಕ್ಕೆ ಅಪ್ಪಳಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಮಾನಗಳು ಡಿಕ್ಕಿಯಾದ ಕೆಲವೇ ಸೆಕೆಂಡುಗಳಲ್ಲಿ ಆಕಾಶದಲ್ಲಿ ನಾಲ್ಕು ಪ್ಯಾರಾಚೂಟ್‌ಗಳು ತೆರೆದುಕೊಳ್ಳುವ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿವೆ.
- ಸ್ಥಳ: ಬೋಯಿಸಿಯಿಂದ (Boise) ಆಗ್ನೇಯಕ್ಕೆ ಸುಮಾರು 50 ಮೈಲಿ ದೂರದಲ್ಲಿರುವ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್‌ನ ‘ಗನ್‌ಫೈಟರ್ ಸ್ಕೈಸ್ ಏರ್ ಶೋ’ (Gunfighter Skies Air Show).
- ವಿಮಾನಗಳು: ಇಎ-18ಜಿ ಗ್ರೋಲರ್ (EA-18G Growler) ಯುದ್ಧ ವಿಮಾನಗಳು ಎಂದು ನಂಬಲಾಗಿದೆ.
- ಘಟನೆ: ಸ್ಥಳೀಯ ಮಾಧ್ಯಮವಾದ ‘ಐಡಾಹೋ ನ್ಯೂಸ್’ ವರದಿ ಪ್ರಕಾರ, ಈ ವಿಮಾನಗಳು ಅತ್ಯಂತ ಹತ್ತಿರದಿಂದ ಹಾರಾಟ ನಡೆಸುವ ಫಾರ್ಮೇಷನ್ (close-formation) ಪ್ರದರ್ಶನ ನೀಡುತ್ತಿದ್ದಾಗ, ಬೇಸ್‌ನಿಂದ ಸುಮಾರು ಎರಡು ಮೈಲಿ ದೂರದಲ್ಲಿ ಪರಸ್ಪರ ಡಿಕ್ಕಿ ಹೊಡೆದವು.
ಪ್ರತ್ಯಕ್ಷದರ್ಶಿಗಳು ಚಿತ್ರೀಕರಿಸಿದ ವಿಡಿಯೋಗಳಲ್ಲಿ, ವಿಮಾನಗಳು ಅತ್ಯಂತ ಹತ್ತಿರದಲ್ಲಿ ಹಾರಾಡುತ್ತಾ ಆಕಸ್ಮಿಕವಾಗಿ ಒಂದಕ್ಕೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ವಿಮಾನಗಳು ನೆಲಕ್ಕೆ ಬೀಳುವಾಗ ಅವುಗಳಿಂದ ಕಿಡಿಗಳು ಹೊರಹೊಮ್ಮಿದ್ದು, ನಂತರ ಭಾರಿ ಸ್ಫೋಟದೊಂದಿಗೆ ದಟ್ಟವಾದ ಕಪ್ಪು ಹೊಗೆ ಆಕಾಶವನ್ನು ಆವರಿಸಿಕೊಂಡಿತು.

