ಕೇದರನಾಥ ಯಾತ್ರೆಯನ್ನು ಸಾಮಾನ್ಯವಾಗಿ ಭಕ್ತಿ ಮತ್ತು ಸಹಿಷ್ಣುತೆಯ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಭಕ್ತರು ಕಡಿದಾದ ಪರ್ವತ ಮಾರ್ಗಗಳಲ್ಲಿ ಕಾಲ್ನಡಿಗೆಯ ಮೂಲಕ ಪ್ರಯಾಣಿಸುತ್ತಾರೆ. ಯಾತ್ರೆಯ ಸಮಯದಲ್ಲಿ ವಯಸ್ಸಾದ ಮತ್ತು ದೈಹಿಕವಾಗಿ ದೌರ್ಬಲ್ಯ ಹೊಂದಿರುವ ಭಕ್ತರನ್ನು ಪೋರ್ಟರ್‌ಗಳು (ಹೊರೆಹೊರುವವರು) ಹೊತ್ತೊಯ್ಯುವುದು ಸಾಮಾನ್ಯವಾಗಿದೆ. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವಿಡಿಯೋವೊಂದು ತೀರಾ ಭಿನ್ನವಾದ ಕಾರಣಕ್ಕಾಗಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಭಕ್ತಿ ಮತ್ತು ದೈಹಿಕ ಶ್ರಮಕ್ಕೆ ಹೆಸರಾದ ಕೇದರನಾಥ ಯಾತ್ರೆಯ ಮಾರ್ಗದಲ್ಲಿ ಚಿತ್ರೀಕರಿಸಲಾದ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ವಯಸ್ಸಾದವರು ಅಥವಾ ಅಶಕ್ತರು ಪೋರ್ಟರ್‌ಗಳ ಸಹಾಯ ಪಡೆಯುವುದು ವಾಡಿಕೆ. ಆದರೆ, ಇಲ್ಲಿ ಸಂಪೂರ್ಣ ಸದೃಢವಾಗಿ ಕಾಣುವ ವ್ಯಕ್ತಿಯೊಬ್ಬರು ಸ್ಥಳೀಯ ಪೋರ್ಟರ್ ಬೆನ್ನೇರಿ ಆರಾಮವಾಗಿ ಕುಳಿತಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಸಂಪೂರ್ಣವಾಗಿ ಸದೃಢವಾಗಿರುವ ಮತ್ತೊಬ್ಬ ಪುರುಷನನ್ನು ತನ್ನ ಬೆನ್ನಿನ ಮೇಲೆ ಹೊತ್ತು ಪರ್ವತದ ಹಾದಿಯಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ಇದನ್ನು ನೋಡಿದ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು, ಇಂತಹ ಕಠಿಣ ಯಾತ್ರೆಗಳಿಗೆ ಹೋಗುವ ಜನರ ದೈಹಿಕ ಫಿಟ್‌ನೆಸ್ ಮತ್ತು ಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಕಷ್ಟಪಟ್ಟ ಪೋರ್ಟರ್
ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಸ್ಥಳೀಯ ಪೋರ್ಟರ್ ಒಬ್ಬರು ತನ್ನ ಬೆನ್ನಿಗೆ ಕಟ್ಟಲಾದ ಸಾಂಪ್ರದಾಯಿಕ ಬುಟ್ಟಿಯಂತಹ ವಾಹಕದಲ್ಲಿ ಕುಳಿತಿರುವ ವ್ಯಕ್ತಿಯನ್ನು ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು. ಅದರಲ್ಲಿ ಕುಳಿತಿರುವ ಪ್ರಯಾಣಿಕ ವಯಸ್ಸಾದವನಾಗಲಿ ಅಥವಾ ದೈಹಿಕವಾಗಿ ಅಶಕ್ತನಾಗಲಿ ತರಹ ಕಾಣಿಸುತ್ತಿಲ್ಲ. ಇದೇ ಈಗ ಆನ್‌ಲೈನ್ ಚರ್ಚೆಯ ಪ್ರಮುಖ ವಿಷಯವಾಗಿದೆ.
ಭಾರವನ್ನು ಹೊತ್ತ ಪೋರ್ಟರ್ ಬೆಟ್ಟದ ಹಾದಿಯಲ್ಲಿ ತೀರಾ ಕಷ್ಟಪಡುತ್ತಾ, ನಿಧಾನವಾಗಿ ಹೆಜ್ಜೆ ಇಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಉಬ್ಬು-ತಗ್ಗುಗಳ ಪರ್ವತದ ಹಾದಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅವರು ತೀವ್ರವಾಗಿ ಶ್ರಮಿಸುತ್ತಿದ್ದು, ಕೆಲವು ಕ್ಷಣಗಳಲ್ಲಿ ಸಂಪೂರ್ಣವಾಗಿ ಸುಸ್ತಾಗಿರುವಂತೆ ಕಾಣುತ್ತಾರೆ. ಮತ್ತೊಂದೆಡೆ, ಪ್ರಯಾಣಿಕನು ತನ್ನ ಪಕ್ಕದಲ್ಲೇ ಬ್ಯಾಕ್‌ಪ್ಯಾಕ್ ಇಟ್ಟುಕೊಂಡು ಆರಾಮವಾಗಿ ಬುಟ್ಟಿಯೊಳಗೆ ಕುಳಿತಿರುವುದನ್ನು ಕಾಣಬಹುದು.
ಈ ದೃಶ್ಯಗಳು ಉತ್ತರಾಖಂಡದ ಕೇದರನಾಥ ಯಾತ್ರೆಯ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾರ್ಗಗಳಂತೆಯೇ ಇವೆ. ಅಲ್ಲಿ ಯಾತ್ರಿಕರು ಕಠಿಣ ಹಾದಿಗಳನ್ನು ಕ್ರಮಿಸಲು ಸ್ಥಳೀಯರನ್ನು ಬಾಡಿಗೆಗೆ ಪಡೆಯುವುದು ವಾಡಿಕೆ. ಆದರೆ, ಈ ವಿಡಿಯೋದ ನಿಖರವಾದ ಸ್ಥಳ ಮತ್ತು ದಿನಾಂಕ ಇನ್ನೂ ದೃಢಪಟ್ಟಿಲ್ಲ.
ಈ ವಿಡಿಯೋ ಮುನ್ನೆಲೆಗೆ ಬರುತ್ತಿದ್ದಂತೆ, ಧಾರ್ಮಿಕ ಪ್ರಯಾಣದ ಸಮಯದಲ್ಲಿ ಜನರ ಆರೋಗ್ಯ, ಫಿಟ್‌ನೆಸ್ ಮತ್ತು ಪೋರ್ಟರ್‌ಗಳ ಮೇಲಿನ ಅತಿಯಾದ ಅವಲಂಬನೆಯ ಬಗ್ಗೆ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ.
ಫಿಟ್‌ನೆಸ್ ಮತ್ತು ತೀರ್ಥಯಾತ್ರೆ ಕುರಿತು ಚರ್ಚೆ
ವಿಡಿಯೋ ವೀಕ್ಷಿಸಿದ ಬಳಿಕ ಅನೇಕ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಪರ್ವತ ಯಾತ್ರೆಗಳಿಗೆ ದೈಹಿಕವಾಗಿ ಸಿದ್ಧರಾಗದೆ ಬರುವ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಕೆದಾರರೊಬ್ಬರು ಹೀಗೆ ಹೇಳಿದ್ದಾರೆ, “ಕೇವಲ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರ ತಿನ್ನುವ ಇಂದಿನ ಮಧ್ಯವಯಸ್ಕರು, ತಮ್ಮ ಮುತ್ತಜ್ಜಂದಿರು ಆಲೂ ಪರೋಟ, ದಾಲ್ ಚಾವಲ್ ಮತ್ತು ರೊಟ್ಟಿ-ಸಬ್ಜಿ ತಿಂದು 100 ವರ್ಷ ಬದುಕಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಹರಟೆ ಹೊಡೆಯುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರಿಗೆ ಪರ್ವತದ ಯಾತ್ರೆಯಲ್ಲಿ 200 ಮೀಟರ್ ಕೂಡ ಹತ್ತಲು ಸಾಧ್ಯವಾಗುವುದಿಲ್ಲ. ಕೊನೆಗೆ ಸ್ಥಳೀಯ ವ್ಯಕ್ತಿಯೊಬ್ಬನನ್ನು ಬೆನ್ನ ಮೇಲೆ ಹೊತ್ತುಕೊಳ್ಳಲು ಬಾಡಿಗೆಗೆ ಪಡೆಯುತ್ತಾರೆ. ಅವರೊಂದಿಗೂ ಬೆಲೆಗಾಗಿ ಚೌಕಾಶಿ ಮಾಡುತ್ತಾರೆ ಮತ್ತು ಅಲ್ಲಿ 60 ರೂಪಾಯಿಗೆ ಮ್ಯಾಗಿ ಮಾರುತ್ತಿದ್ದಾರೆ ಎಂದು ದೂರುತ್ತಾರೆ.”
ಮತ್ತೊಬ್ಬರು ಬರೆದಿದ್ದಾರೆ, “ನೀವು ಹೇಳುತ್ತಿರುವುದು 100% ನಿಜ. ಮುಂದಿನ ಪೀಳಿಗೆಯಾದರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಪ್ರೊಟೀನ್ ಆಹಾರ ಸೇವನೆಗೆ ಗಮನ ಕೊಡಲಿ ಎಂದು ಆಶಿಸುತ್ತೇನೆ. ಇಲ್ಲಿ ಜರ್ಮನಿಯಲ್ಲಿ ಜನರು ನಿಯಮಿತವಾಗಿ ಹೈಕಿಂಗ್ (ಬೆಟ್ಟ ಹತ್ತುವುದು) ಮಾಡುತ್ತಾರೆ. 70 ವರ್ಷ ದಾಟಿದ ವೃದ್ಧರು ಸಹ ಇದರಲ್ಲಿ ಭಾಗವಹಿಸುತ್ತಾರೆ.”
“ಹೌದು, ಏಕೆಂದರೆ ಇಂದಿನ ಜನರಿಗೆ ಯಾವುದೇ ದೈಹಿಕ ಶ್ರಮದ ಕೆಲಸ ಇರುವುದಿಲ್ಲ. ಆದರೆ ನಮ್ಮ ಮುತ್ತಜ್ಜಂದಿರು ದಿನವಿಡೀ ಕಠಿಣ ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿದ್ದರು,” ಎಂದು ಇನ್ನೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ದೈಹಿಕವಾಗಿ ಫಿಟ್ ಇಲ್ಲದ ಹಿಂದೂಗಳಿಗೆ ತೀರ್ಥಯಾತ್ರೆಯನ್ನು ನಿಷೇಧಿಸಬೇಕು. ತೀರ್ಥಯಾತ್ರೆ ಎಂಬುದು ಕೇವಲ ದೈಹಿಕವಾಗಿ ಸದೃಢರಾಗಿರುವ ಮತ್ತು ಸ್ವತಃ ಪ್ರಯಾಣ ಬೆಳೆಸಬಲ್ಲವರಿಗೆ ಮಾತ್ರ ಇರಬೇಕು. ಹಿಂದೂ ಧರ್ಮದಲ್ಲಿ ತೀರ್ಥಯಾತ್ರೆಯ ಮಹತ್ವವೇ ಅದು. ದೇವರನ್ನು ಕಾಣಲು ನಿಮ್ಮ ಆಸ್ತೆ (ಭಕ್ತಿ) ಮತ್ತು ದೇಹ ಅಷ್ಟು ಬಲವಾಗಿಲ್ಲದಿದ್ದರೆ, ನಿಮಗೆ ದೇವರನ್ನು ಭೇಟಿಯಾಗುವ ಅರ್ಹತೆಯೇ ಇಲ್ಲ,” ಎಂದಿದ್ದಾರೆ.
ಕೊನೆಯದಾಗಿ ಮತ್ತೊಂದು ಕಮೆಂಟ್ ಹೀಗಿದೆ, “ಕೇದರನಾಥದಲ್ಲಿ ವಿದೇಶಿ ಪ್ರವಾಸಿಗರು ಸ್ವತಃ ತಮ್ಮ ಕಾಲಿನ ಮೇಲೆ ನಡೆದುಕೊಂಡು ಹೋಗುತ್ತಿದ್ದರೆ, ಭಾರತೀಯ ಮಧ್ಯವಯಸ್ಕರು ಬೇರೆಯವರು ತಮ್ಮನ್ನು ಹೊತ್ತೊಯ್ಯಲಿ ಎಂದು ಕಾಯುತ್ತಿರುವುದನ್ನು ತೋರಿಸುವ ವಿಡಿಯೋ ನನಗೆ ಯಾವಾಗಲೂ ನೆನಪಿಗೆ ಬರುತ್ತದೆ.”ಇದಕ್ಕೂ ಆಹಾರ ಪದ್ಧತಿಗೂ ಯಾವುದೇ ಸಂಬಂಧವಿಲ್ಲ. ಎಲ್ಲವೂ ನಿಮ್ಮ ದೈಹಿಕ ತರಬೇತಿಯನ್ನು ಅವಲಂಬಿಸಿರುತ್ತದೆ,” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

