ಹಾಸನ: ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲು ವರ ಸಿದ್ಧತೆ ನಡೆಸಿದ್ದ. ಎರಡೂ ಕುಟುಂಬಗಳಲ್ಲಿಯೂ ಮದುವೆ ತಯಾರಿ ಜೋರಾಗಿತ್ತು. ಇನ್ನೇನು ಕೆಲ ದಿನಗಳಲೇ ವಧು-ವರರು ಹಸೆಮಣೆಯೇರುವ ಸಂದರ್ಭ. ಹಾಗಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ವರ್, ವಧುವನ್ನು ಕರೆತರಲು ಹೋಗುತ್ತಿದ್ದಾಗ ದುರಂತವೊಂದು ಸಂಭವಿಸಿದೆ.
ಪ್ರೀವೆಡ್ಡಿಂಗ್ ಫೋಟೋ ಶೂಟ್ ಗೆ ವಧುವನ್ನು ಕರೆತರಲು ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ ವರ ಸ್ಥಳದಲ್ಲೇ ಸಾವನ್ನಪ್ಪಿರುವ ಘೋರ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ನಡೆದಿದೆ.
ಮನು.ಎಲ್.ಎನ್. (29) ಮೃತ ದುರ್ದೈವಿ. ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆ ನಿವಾಸಿ. ಮೇ 10 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ನಿಶ್ಚಯವಾಗಿತ್ತು. ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು.
ಎರಡೂ ಕುಟುಂಬಗಳಲ್ಲಿಯೂ ಮದುವೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಇಂದು ಬೆಳಿಗ್ಗೆ ಮನು ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ವಧುವನ್ನು ಕರೆತರಲು ತಮ್ಮ ವಿಟಾರಾ ಬ್ರೆಝಾ ಕಾರಿನಲ್ಲಿ ಹೊರಟಿದ್ದರು. ಮೂಗಲಿ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮನು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ ಎರಡೂ ಮನೆಗಳಲ್ಲಿಯೂ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

