ಹಾಸನ: 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಈ ವೇಳೆ ಹಲವೆಡೆ ಗೊಂದಲಗಳು ಉಂತಾಗಿವೆ. ಹಾಸನ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಒಎಂಆರ್ (OMR) ಶೀಟ್‌ಗಳು ಅದಲು-ಬದಲಾಗಿದ್ದು, ಅಭ್ಯರ್ಥಿಗಳು ತೀವ್ರ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಹಾಸನ ನಗರದ ಗಂಧದ ಕೋಠಿ/ಆರ್.ಸಿ. ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪರೀಕ್ಷಾ ಕೇಂದ್ರ ಸಂಖ್ಯೆ: 512) ನಲ್ಲಿ ಈ ಘಟನೆ ಸಂಭವಿಸಿದೆ. ಪರೀಕ್ಷೆ ಆರಂಭವಾದ ಸುಮಾರು ಒಂದು ಗಂಟೆಯ ಬಳಿಕ, ಎರಡು ಕೊಠಡಿಗಳಲ್ಲಿದ್ದ ಅಭ್ಯರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳ ಸಂಖ್ಯೆ ತಾಳೆಯಾಗುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಇದರಿಂದ ಆತಂಕಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಬಂದು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಪರೀಕ್ಷಾ ಹಾಲ್‌ನಲ್ಲಿ ಗಂಟೆಗೂ ಹೆಚ್ಚು ಕಾಲ ಗೊಂದಲ ಹಾಗೂ ಗಲಾಟೆ ನಡೆದಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಉಂಟಾಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪರೀಕ್ಷಾ ಕೇಂದ್ರದ ಸಿಬ್ಬಂದಿ ಹಾಗೂ ಅಭ್ಯರ್ಥಿಗಳಿಂದ ಮಾಹಿತಿ ಪಡೆದರು. ಬಳಿಕ ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆ ನಡೆಸಿದರು.
ಎರಡು ಕೊಠಡಿಗಳಲ್ಲಿ ಗೊಂದಲವಾಗಿದೆ ಎಂದು ಅಭ್ಯರ್ಥಿಗಳು ಭಾವಿಸಿದ್ದರು. ಆದರೆ ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಯಾವುದೇ ರೀತಿಯ ಲೋಪವಾಗಿಲ್ಲ. ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್ ಸಂಖ್ಯೆ ಬೇರೆ ಬೇರೆಯಾಗಿದ್ದರೂ ತಾಂತ್ರಿಕವಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ. ಪ್ರಶ್ನೆ ಪತ್ರಿಕೆ ಸಂಖ್ಯೆಯನ್ನು ಒಎಂಆರ್ ಶೀಟ್‌ನಲ್ಲಿ ಸರಿಯಾಗಿ ನಮೂದಿಸಿದರೆ ಸಾಕು. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾವುದೇ ಅಭ್ಯರ್ಥಿಯೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

