ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಮತ್ತೊಮ್ಮೆ ವದಂತಿಗಳು ಹರಿದಾಡುತ್ತಿವೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇರುವ ಇಮ್ರಾನ್ ಖಾನ್ ಜೀವಂತವಾಗಿದ್ದಾರೆಯೇ ಎಂಬ ಅನುಮಾನಗಳು ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ವಲಯಗಳಲ್ಲಿ ವ್ಯಕ್ತವಾಗುತ್ತಿವೆ.
ಈ ನಡುವೆ ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನಿ ಪತ್ರಕರ್ತ ವಜಾಹತ್ ಸಯೀದ್ ಖಾನ್ ಮಾಡಿರುವ ಹೇಳಿಕೆ ಇಮ್ರಾನ್ ಖಾನ್ ಅವರ ಸುರಕ್ಷತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. “ಇಮ್ರಾನ್ ಖಾನ್ ಜೈಲಿನಲ್ಲೇ ಮೃತಪಟ್ಟಿರಬಹುದು ಎಂದು ಮೂವರು ಹಿರಿಯ ಸೇನಾ ಮೂಲಗಳು ನನಗೆ ತಿಳಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಕುಟುಂಬ ಸದಸ್ಯರು ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಪಕ್ಷದ ನಾಯಕರಿಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಆರೋಪಗಳ ನಡುವೆಯೇ ಪತ್ರಕರ್ತನ ಈ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.ಆದರೆ, ಬಳಿಕ ಪತ್ರಕರ್ತ ವಜಾಹತ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸೇನಾ ಮುಖ್ಯ ಕಚೇರಿಗೆ ಸಂಬಂಧಿಸಿದ ಮೂವರು ಹಿರಿಯ ಅಧಿಕಾರಿಗಳಿಂದ ಬಂದ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ದೃಢಪಟ್ಟಿಲ್ಲ. ಅದು ಅವರ ವೈಯಕ್ತಿಕ ಅಂದಾಜು ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂಬ ಯಾವುದೇ ಸಾಕ್ಷ್ಯವನ್ನು ಆ ಅಧಿಕಾರಿಗಳು ಸ್ವತಃ ನೋಡಿಲ್ಲ. ಅವರ ಹೇಳಿಕೆ ಕೇವಲ “ಭಯ ಮತ್ತು ಆತಂಕ” ಆಧಾರಿತವಾಗಿದ್ದು, ಖಚಿತ ಮಾಹಿತಿಯಲ್ಲ ಎಂದು ಅವರು ತಿಳಿಸಿದ್ದಾರೆ.
20 ಲಕ್ಷ ಮಂದಿಯೊಂದಿಗೆ ಲಾಂಗ್ ಮಾರ್ಚ್ ಎಚ್ಚರಿಕೆ
ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಯಾವುದೇ ಮಾಹಿತಿ ನೀಡದಿರುವುದು ಮತ್ತು ಕುಟುಂಬ ಸದಸ್ಯರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡದಿರುವುದನ್ನು ಖಂಡಿಸಿ ಸೆಪ್ಟೆಂಬರ್ 27ರಂದು 20 ಲಕ್ಷ ಜನರೊಂದಿಗೆ ರಾಜಧಾನಿ ಇಸ್ಲಾಮಾಬಾದ್ನತ್ತ ಲಾಂಗ್ ಮಾರ್ಚ್ ನಡೆಸುವುದಾಗಿ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಹಾಗೂ PTI ನಾಯಕ ಸೋಹೈಲ್ ಅಫ್ರಿದಿ ಎಚ್ಚರಿಸಿದ್ದಾರೆ.
ಯುವಕರ ಆಕ್ರೋಶವನ್ನು ನಿಯಂತ್ರಿಸಲು ಸೇನೆಯಿಂದಲೂ ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಅವಕಾಶ ನೀಡದಿದ್ದರೆ ಸುಪ್ರೀಂ ಕೋರ್ಟ್ ಎದುರು ಪ್ರತಿಭಟನೆ ನಡೆಸುವುದಾಗಿ PTI ಕೂಡ ತಿಳಿಸಿದೆ.
ಇಮ್ರಾನ್ ಖಾನ್ ವಿಚಾರದಲ್ಲಿ ಅಮೆರಿಕದಿಂದಲೂ ಒತ್ತಡ
ಇಮ್ರಾನ್ ಖಾನ್ ಅವರ ಬಂಧನದ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚುತ್ತಿದೆ. ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಅಮೆರಿಕದ 13 ಸಂಸದರು ವಿದೇಶಾಂಗ ಸಚಿವ ಮಾರ್ಕೊ ರೂಬಿಯೊಗೆ ಪತ್ರ ಬರೆದಿದ್ದಾರೆ.ಇಮ್ರಾನ್ ಖಾನ್ ಅವರನ್ನು ದಿನಕ್ಕೆ 23 ಗಂಟೆಗಳ ಕಾಲ ಏಕಾಂತ ಬಂಧನದಲ್ಲಿ ಇರಿಸಲಾಗುತ್ತಿದೆ ಮತ್ತು ಅವರ ಬಲಗಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬಿಬಿ ಅವರ ಹಕ್ಕುಗಳ ಸ್ಥಿತಿಗತಿ ಕುರಿತು ಪಾಕಿಸ್ತಾನ ಸರ್ಕಾರದೊಂದಿಗೆ ಚರ್ಚಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ಪಾಕಿಸ್ತಾನದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ. ಒಂದು ಕಡೆ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂಬ ದೃಢೀಕರಿಸದ ವದಂತಿಗಳು, ಮತ್ತೊಂದೆಡೆ ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕುಟುಂಬಸ್ಥರು ಮತ್ತು PTI ಮಾಡುತ್ತಿರುವ ಒತ್ತಾಯಗಳು ಪರಿಸ್ಥಿತಿಯನ್ನು ಬಿಗಿಗೊಳಿಸಿವೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಕಳವಳ ಮತ್ತು 20 ಲಕ್ಷ ಜನರೊಂದಿಗೆ ಪ್ರತಿಭಟನೆ ನಡೆಸುವ PTI ಎಚ್ಚರಿಕೆಯೂ ರಾಜಕೀಯ ವಾತಾವರಣವನ್ನು ಮತ್ತಷ್ಟು ಬಿಸಿಗೊಳಿಸಿದೆ.
ಇಮ್ರಾನ್ ಖಾನ್ ಜೈಲಿನಲ್ಲಿ ಏಕೆ?
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 2023ರ ಆಗಸ್ಟ್ 5ರಿಂದ ಜೈಲಿನಲ್ಲಿದ್ದಾರೆ. ‘ಅಲ್-ಖಾದಿರ್ ಟ್ರಸ್ಟ್’ ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.2025ರ ಜನವರಿಯಲ್ಲಿ ಇದೇ ಪ್ರಕರಣದಲ್ಲಿ ಅವರ ಪತ್ನಿ ಬುಷ್ರಾ ಬಿಬಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪುಗಳನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.
ಇದರ ಜೊತೆಗೆ 2023ರ ಮೇ 9ರಂದು PTI ಬೆಂಬಲಿಗರು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಘಟನೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಇಮ್ರಾನ್ ಖಾನ್ ವಿರುದ್ಧ ವಿಚಾರಣೆ ನಡೆಯುತ್ತಿದೆ.ಇಮ್ರಾನ್ ಖಾನ್ ತಮ್ಮ ಬಂಧನದ ಹಿಂದೆ ಪ್ರಸ್ತುತ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಕಾರಣ ಎಂದು ಹಲವು ಬಾರಿ ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಮತ್ತು ಆಸಿಮ್ ಮುನೀರ್ ನಡುವೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯವಿದೆ ಎಂದು ವರದಿಯಾಗಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆಸಿಮ್ ಮುನೀರ್ ಐಎಸ್ಐ ಮುಖ್ಯಸ್ಥರಾಗಿದ್ದರು. ವೈಯಕ್ತಿಕ ವಿಚಾರಗಳಲ್ಲಿ ಮುನೀರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲು ಇಮ್ರಾನ್ ಖಾನ್ ಬಯಸಿದ್ದರು ಎಂಬ ವರದಿಗಳೂ ಇವೆ. ಇದೀಗ ಆಸಿಮ್ ಮುನೀರ್ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದಾರೆ.

